ಚೆನ್ನೈ (ತಮಿಳುನಾಡು):ಸೆಂಥಿಲ್ ಬಾಲಾಜಿ ಅವರ ಬಂಧನ ಯಾವುದೇ ಸೇಡಿನ ರಾಜಕಾರಣವಲ್ಲ ಎಂದು ಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಬುಧವಾರ ಹೇಳಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಿರುವ ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿ ಅವರ ಕುರಿತು ಇಲ್ಲಿನ ಬಿಜೆಪಿ ರಾಜ್ಯ ಪ್ರಧಾನ ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿರುವ ಅಣ್ಣಾಮಲೈ, ಡಿಎಂಕೆ ನಾಯಕ ಮತ್ತು ತಮಿಳುನಾಡು ಪವರ್ ಮಿನಿಸ್ಟರ್ ಸೆಂಥಿಲ್ ಬಾಲಾಜಿ ಬಂಧನ ರಾಜಕೀಯ ದುರುದ್ದೇಶದಿಂದ ಅಲ್ಲ, ಕಾನೂನಿನ ಚೌಕಟ್ಟಿನಲ್ಲಿ ಏನು ನಡೆಯಬೇಕೋ ಅದು ನಡೆದಿದೆ. ಇದರಲ್ಲಿ ರಾಜಕೀಯ ಬೆರೆಸಬೇಡಿ ಎಂದು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಸೆಂಥಿಲ್ ಬಾಲಾಜಿ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದೆ. ಉದ್ಯೋಗ ಹಗರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆಗಾಗಿ ಇಡಿ ದಾಳಿ ನಡೆಸಿ ಅವರನ್ನು ವಶಕ್ಕೆ ಪಡೆದಿದೆ. ಇದು ಸೇಡಿನ ರಾಜಕಾರಣವಲ್ಲ. ಬಿಜೆಪಿ ಪಕ್ಷಕ್ಕೆ ಅದರ ಅವಶ್ಯಕತೆಯೂ ಇಲ್ಲ ಎಂದರು.
ಈಗಿನ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ 2016ರಲ್ಲಿ ಪ್ರತಿಪಕ್ಷದ ನಾಯಕರಾಗಿದ್ದಾಗ ಎಐಎಡಿಎಂಕೆಯಲ್ಲಿದ್ದ ಸೆಂಥಿಲ್ ಬಾಲಾಜಿ ಅವರನ್ನು ಭ್ರಷ್ಟ ಎಂದು ಕರೆದಿದ್ದರು. ಸೆಂಥಿಲ್ ಬಾಲಾಜಿ ವಿರುದ್ಧದ ಆರೋಪಗಳ ಬಗ್ಗೆ ನ್ಯಾಯಯುತ ತನಿಖೆ ಮಾಡುವಂತೆ ಸ್ಟಾಲಿನ್ ಸ್ವತಃ ಅಂದು ಕರೆ ನೀಡಿದ್ದರು. 2016ರಲ್ಲಿ ಮುಖ್ಯ ಕಾರ್ಯದರ್ಶಿ ಕಚೇರಿ ಮೇಲೆ ಐಟಿ ಇಲಾಖೆ ದಾಳಿ ನಡೆಸಿದಾಗ ಸ್ಟಾಲಿನ್ ಸ್ವಾಗತಿಸಿದ್ದರು. 2018ರಲ್ಲಿ ಬದಲಾದ ರಾಜಕೀಯ ಸನ್ನಿವೇಶದಿಂದ ಬಾಲಾಜಿ ಅವರು ಡಿಎಂಕೆ ಸೇರಿದರು. ಡಿಎಂಕೆ ಪಕ್ಷ ಸೇರಿದ ತಕ್ಷಣ ನಿರಪರಾಧಿಯಾಗುತ್ತಾರಾ ಎಂದು ಪ್ರಶ್ನೆ ಮಾಡಿದ ಅಣ್ಣಾಮಲೈ, ಮುಖ್ಯಮಂತ್ರಿಗಳು ಸೇರಿದಂತೆ ಯಾರೇ ಆಗಲಿ, ಇಡಿ ತನಿಖೆಗೆ ಸಹಕರಿಸಬೇಕು. ವ್ಯತಿರಿಕ್ತ ಹೇಳಿಕೆಗಳನ್ನು ನೀಡುವ ಮೂಲಕ ರಾಜ್ಯದ ಪ್ರತಿಷ್ಠೆಯನ್ನು ಹಾಳು ಮಾಡಬಾರದು ಮನವಿ ಮಾಡಿದ್ದಾರೆ.
ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಇಡಿ ದಾಳಿ ಮಾಡಿದೆ. ಪ್ರತಿಪಕ್ಷಗಳು ಇದನ್ನು ರಾಜಕೀಯಗೊಳಿಸುತ್ತಿದ್ದಾರೆ. ಒಂದು ಕಾಲದಲ್ಲಿ ಸರಿ ಅನ್ನುತ್ತಿದ್ದವರೇ ಇಂದು ಇಡಿ ಸೆಕ್ರೆಟರಿಯೇಟ್‌ಗೆ ಪ್ರವೇಶಿಸುವುದು ತಪ್ಪು ಎಂದು ಹೇಳುತ್ತಿದ್ದಾರೆ. ಇದು ಯಾವ ರಾಜಕಾರಣ ಎಂದು ಗೊತ್ತಾಗುತ್ತಿಲ್ಲ. ಡಿಎಂಕೆ ಮತ್ತು ಅದರ ಮಿತ್ರಪಕ್ಷಗಳನ್ನು ಬಗ್ಗುಬಡಿಯಲು ಇಡಿ ಮತ್ತು ಆದಾಯ ತೆರಿಗೆಯಂತಹ ಕೇಂದ್ರೀಯ ಸಂಸ್ಥೆಗಳನ್ನು ಭಾರತೀಯ ಜನತಾ ಪಾರ್ಟಿ ತನ್ನ ಕೈಗೊಂಬೆಯಾಗಿ ಮಾಡಿಕೊಂಡಿದೆ ಎಂದು ಆರೋಪ ಮಾಡುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದ ಮಾತು ಎಂದು ಅಣ್ಣಾಮಲೈ ಹೇಳಿದ್ದಾರೆ.
ಇಡಿ ಸೆಂಥಿಲ್ ಬಾಲಾಜಿಯನ್ನು ಬಂಧಿಸಿದ ದಿನವೇ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಬೇಕು. ಒಂದು ತಿಂಗಳ ಹಿಂದೆ ಸೆಂಥಿಲ್ ಬಾಲಾಜಿ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ರಾಜ್ಯಪಾಲರಿಗೆ ನಾವು ಮನವಿ ಸಲ್ಲಿಸಿದ್ದೆವು. ಅಲ್ಲದೇ ಸೆಂಥಿಲ್ ಬಾಲಾಜಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸುವಂತೆ ತಮಿಳುನಾಡು ಪೊಲೀಸರಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ್ದರೂ ಮುಖ್ಯಮಂತ್ರಿ ಈ ಬಗ್ಗೆ ಕ್ರಮ ಕೈಗೊಳ್ಳಲಿಲ್ಲ. ಅವರ ಅಹಂಕಾರವೇ ಅವರನ್ನು ಕಾಡುತ್ತಿದೆ. ಅವರನ್ನು ಸಚಿವ ಸ್ಥಾನದಿಂದ ತೆಗೆಯದಿರುವುದು ಸಹಜ ನ್ಯಾಯದ ತತ್ವಕ್ಕೆ ಅಪಚಾರ. ಮೊದಲು ಆ ಕೆಲಸ ಮಾಡಬೇಕು ಎಂದು ಅಣ್ಣಾಮಲೈ ಒತ್ತಾಯಿಸಿದರು.