ಪುಣೆ:ಮುಂದಿನ ವರ್ಷ ಜನವರಿ ಅಂತ್ಯದ ವೇಳೆಗೆ ರೈತರಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಇಟ್ಟಿರುವ ಬೇಡಿಕೆಯನ್ನು ಕೇಂದ್ರ ಸರ್ಕಾರವು ಈಡೇರಿಸದಿದ್ದರೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಎಚ್ಚರಿಕೆ ನೀಡಿದ್ದು, ಇದು ತಮ್ಮ "ಕೊನೆಯ ಪ್ರತಿಭಟನೆ" ಎಂದಿದ್ದಾರೆ.
ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯ ತಮ್ಮ ರಾಲೆಗಾಂವ್ ಸಿದ್ಧಿ ಗ್ರಾಮದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ಬೆಳೆಗಾರರಿಗಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ. ಆದರೆ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಏನೂ ಕ್ರಮ ತೆಗೆದುಕೊಂಡಿಲ್ಲ.
"ಸರ್ಕಾರವು ಕೇವಲ ಸುಳ್ಳು ಭರವಸೆಗಳನ್ನು ನೀಡುತ್ತಿದೆ. ಇದರಿಂದಾಗಿ ನನಗೆ ಸರ್ಕಾರದ ಮೇಲೆ ಯಾವುದೇ ನಂಬಿಕೆ ಉಳಿದಿಲ್ಲ. ನೋಡೋಣ, ನನ್ನ ಬೇಡಿಕೆಗಳ ಮೇಲೆ ಕೇಂದ್ರವು ಯಾವ ಕ್ರಮ ತೆಗೆದುಕೊಳ್ಳುತ್ತದೆ. ಅವರು ಒಂದು ತಿಂಗಳ ಸಮಯ ಕೋರಿದ್ದಾರೆ. ಹಾಗಾಗಿ ನಾನು ನೀಡಿದ್ದೇನೆ. ಜನವರಿ ಅಂತ್ಯದವರೆಗೆ ಅವರ ಸಮಯ. ನನ್ನ ಬೇಡಿಕೆಗಳನ್ನು ಈಡೇರಿಸದಿದ್ದರೆ ನಾನು ಉಪವಾಸ ಸತ್ಯಗ್ರಹವನ್ನು ಆರಂಭಿಸುತ್ತೇನೆ. ಇದು ನನ್ನ ಕೊನೆಯ ಪ್ರತಿಭಟನೆಯಾಗಿದೆ" ಎಂದು ಹೇಳಿದ್ದಾರೆ.