ಕರ್ನಾಟಕ

karnataka

ETV Bharat / bharat

Anna Bhagya: ಅನ್ನಭಾಗ್ಯದಡಿ ಈವರೆಗೆ 3.29 ಕೋಟಿ ಫಲಾನುಭವಿಗಳಿಗೆ ಹಣ ಜಮೆ: ಹಲವರಿಗೆ ಪಾವತಿ ವಿಳಂಬ - Antyodaya card

Beneficiaries of Anna Bhagya scheme: ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯು 29 ಜಿಲ್ಲೆಗಳ 3,29,83,911 ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ನಗದು ಜಮೆ ಮಾಡಿದೆ. ಈವರೆಗೆ 540.62 ಕೋಟಿ ರೂ. ಮೊತ್ತದ ನಗದನ್ನು ಫಲಾನುಭವಿಗಳ ಖಾತೆಗೆ ಡಿಬಿಟಿ ಮೂಲಕ ಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Anna Bhagya
ಅನ್ನಭಾಗ್ಯ

By

Published : Jul 30, 2023, 7:21 AM IST

ಬೆಂಗಳೂರು :ಕಾಂಗ್ರೆಸ್‌ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊರತೆ ಹಿನ್ನೆಲೆಯಲ್ಲಿ ಫಲಾನುಭವಿಗಳ ಖಾತೆಗೆ ನಗದು ಜಮಾವಣೆ ಪ್ರಕ್ರಿಯೆ ಆರಂಭವಾಗಿ ತಿಂಗಳಾಗುತ್ತಿದೆ. ಇನ್ನೂ ಸುಮಾರು 1 ಕೋಟಿಗೂ ಹೆಚ್ಚು ಫಲಾನುಭವಿಗಳ ಖಾತೆಗೆ ನಗದು ಜಮೆ ಬಾಕಿ ಉಳಿದುಕೊಂಡಿದೆ.

ಅನ್ನಭಾಗ್ಯ ಯೋಜನೆಯಡಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 5 ಕೆ.ಜಿ ಅಕ್ಕಿ ವಿತರಿಸಲು ಯೋಜಿಸಿತ್ತು.‌ ರಾಜ್ಯದ ಅಂತ್ಯೋದಯ ಅನ್ನ ಯೋಜನೆ ಹಾಗೂ ಆದ್ಯತಾ ಪಡಿತರದಾರರಿಗೆ ಐದು ಕೆ.ಜಿ ಉಚಿತ ಅಕ್ಕಿ ನೀಡಲು ನಿರ್ಧರಿಸಿತ್ತು. ಆದರೆ, ಅಕ್ಕಿ ಕೊರತೆ ಎದುರಾದ ಕಾರಣ ಸರ್ಕಾರ ಅಕ್ಕಿ ಬದಲು ಹಣ ಪಾವತಿಗೆ ಆರಂಭಿಸಿದೆ. ಜುಲೈ 10ರಿಂದ ಫಲಾನುಭವಿಗಳ ಖಾತೆಗೆ ನಗದು ಜಮೆ ಮಾಡುವ ಪ್ರಕ್ರಿಯೆ ಆರಂಭವಾಗಿದೆ.

ರಾಜ್ಯದಲ್ಲಿರುವ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಯ ಪ್ರತಿ ಫಲಾನುಭವಿಗೆ ಪ್ರತಿ ತಿಂಗಳು 5 ಕೆ.ಜಿ ಆಹಾರ ಧಾನ್ಯವನ್ನು ವಿತರಿಸಲು ಅಗತ್ಯವಿರುವ ಆಹಾರವನ್ನು ಮುಕ್ತ ಮಾರುಕಟ್ಟೆಯಿಂದ ಖರೀದಿಸಲು ಮುಕ್ತ ಟೆಂಡ‌ರ್ ಕರೆಯಲು ನಿರ್ಧರಿಸಲಾಗಿದೆ. ಈ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಅಕ್ಕಿ ಸರಬರಾಜು ಆಗುವವರೆಗೆ ಜುಲೈನಿಂದ ಜಾರಿಗೆ ಬರುವಂತೆ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಯ ಪ್ರತಿ ಫಲಾನುಭವಿಗೆ ಹೆಚ್ಚುವರಿ 5 ಕಿ.ಜೆ ಆಹಾರ ಧಾನ್ಯದ ಬದಲಾಗಿ ಪ್ರತಿ ಕೆ.ಜಿಗೆ 34 ರೂ.ರಂತೆ ಮಾಸಿಕ 170 ರೂ.‌ ಹಣವನ್ನು ಪಡಿತರ ಫಲಾನುಭವಿಯ ಕುಟುಂಬದ ಮುಖ್ಯಸ್ಥರ ಬ್ಯಾಂಕ್‌ ಖಾತೆಗೆ DBT ಮೂಲಕ ವರ್ಗಾಯಿಸಲಾಗುತ್ತಿದೆ.

ಈವರೆಗಿನ ನಗದು ವರ್ಗಾವಣೆ ವಿವರ : ರಾಜ್ಯ ಸರ್ಕಾರ ಜುಲೈ 10ರಿಂದ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಯ ಪ್ರತಿ ಫಲಾನುಭವಿಗಳ ಖಾತೆಗೆ ನಗದು ಜಮೆ ಮಾಡಲು ಆರಂಭಿಸಿದೆ. ರಾಜ್ಯದಲ್ಲಿ 10,89,990 ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿದಾರರಿದ್ದರೆ, 1,17,26,296 ಆದ್ಯತಾ ಪಡಿತರ ಚೀಟಿದಾರರಿದ್ದಾರೆ. ಒಟ್ಟು 4.42 ಕೋಟಿ ಕುಟುಂಬ ಸದಸ್ಯರು ಇದರ ಫಲಾನುಭವಿಗಳಾಗಿದ್ದಾರೆ.

1 ಕೋಟಿಗೂ ಮೀರಿ ಫಲಾನುಭವಿಗಳಿಗೆ ಪಾವತಿ ಬಾಕಿ :ಅನ್ನಭಾಗ್ಯ ಯೋಜನೆಯ ಮೂಲಕ ರಾಜ್ಯದ ಸುಮಾರು 4.42 ಕೋಟಿ ಬಿಪಿಎಲ್ ಫಲಾನುಭವಿಗಳಿಗೆ ನಗದು ವರ್ಗಾವಣೆಯಾಗಲಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ನೀಡಿದ ಅಂಕಿ-ಅಂಶದಂತೆ ಜುಲೈ 28ರ ವರೆಗೆ 3,29,83,911 ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಲಾಗಿದೆ. ಅದರಂತೆ, ಇನ್ನೂ ಸುಮಾರು 1,12,16,089 ಫಲಾನುಭವಿಗಳಿಗೆ ನಗದು ವರ್ಗಾವಣೆ ಆಗಬೇಕಿದೆ.‌ ಈವರೆಗೆ 540.62 ಕೋಟಿ ರೂ. ಮೊತ್ತದ ನಗದನ್ನು ಫಲಾನುಭವಿಗಳ ಖಾತೆಗೆ DBT ಮೂಲಕ ಜಮೆ ಮಾಡಲಾಗಿದೆ. ಉಡುಪಿ ಮತ್ತು ವಿಜಯನಗರ ಜಿಲ್ಲೆಗಳ 15,55,073 ಫಲಾನುಭವಿಗಳಿಗೆ ಮುಂದಿನ 5 ದಿನಗಳಲ್ಲಿ ಹಣ ಜಮೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನು ಹೊರತುಪಡಿಸಿದರೆ ಇನ್ನೂ 96,61,016 ಫಲಾನುಭವಿಗಳ ಖಾತೆಗೆ ಅನ್ನಭಾಗ್ಯದ ಅಕ್ಕಿಯ ಹಣ ಜಮೆಯಾಗಬೇಕಾಗಿದೆ.

ಇದನ್ನೂ ಓದಿ :ಅನ್ನಭಾಗ್ಯ ಯೋಜನೆ.. ರಾಯಚೂರಿನಲ್ಲಿ 49,505 ಫಲಾನುಭವಿಗಳಿಗೆ ವರ್ಗಾವಣೆ ಆಗದ ಹಣ

ಜನರ ಸಮಸ್ಯೆಗಳು, ಅಧಿಕಾರಿಗಳ ಸ್ಪಷ್ಟನೆ : ಸುಮಾರು 1.22 ಕೋಟಿ ಕಾರ್ಡ್‌ಗಳಲ್ಲಿ ಕನಿಷ್ಠ ಕುಟುಂಬದ ಒಬ್ಬರಾದರೂ ಬ್ಯಾಂಕ್‌ ಖಾತೆ ಹೊಂದಿದ್ದಾರೆ. ಸುಮಾರು 6 ಲಕ್ಷ ಕಾರ್ಡ್‌ಗಳಲ್ಲಿ ಸಮಸ್ಯೆಯಾಗಿದೆ. ಕೆಲವರು ಬ್ಯಾಂಕ್‌ ಖಾತೆ ಹೊಂದಿದ್ದರೆ, ಆಧಾರ್‌ ಲಿಂಕ್‌ ಆಗಿಲ್ಲ. ಆಧಾರ್‌ ಲಿಂಕ್‌ ಆಗಿದ್ದರೆ ಬ್ಯಾಂಕ್‌ ಖಾತೆ ಆ್ಯಕ್ಟಿವ್‌ ಆಗಿಲ್ಲ. ಹೀಗಾಗಿ, ಈ ರೀತಿಯ ಸಮಸ್ಯೆಗಳು ಕಂಡುಬಂದಿವೆ. ಹೀಗಾಗಿ ಕೆಲವರ ಖಾತೆಗೆ ಹಣ ಜಮೆ ವಿಳಂಬವಾಗಲಿದೆ ಎಂದು ಇಲಾಖೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ABOUT THE AUTHOR

...view details