ಚಂಡೀಗಢ(ಪಂಜಾಬ್): ತಕ್ಷಣದಿಂದಲೇ ಜಾರಿಗೆ ಬರುವಂತೆ ಪಂಜಾಬ್ ಸರ್ಕಾರ ಡಾ. ಅನ್ಮೋಲ್ ರತ್ತನ್ ಸಿಧು ಅವರನ್ನ ರಾಜ್ಯದ ನೂತನ ಅಡ್ವೊಕೇಟ್ ಜನರಲ್ ಆಗಿ ನೇಮಿಸಿ, ಆದೇಶ ಹೊರಡಿಸಿದೆ.
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನಲ್ಲಿ ಹಿರಿಯ ವಕೀಲರಾಗಿದ್ದ ಡಾ. ಅನ್ಮೋಲ್ ರತ್ತನ್ ಸಿಧು ಇದೀಗ ಪಂಜಾಬ್ ಅಡ್ವೊಕೇಟ್ ಜನರಲ್ ಆಗಲಿದ್ದಾರೆ. ಇದರ ಬೆನ್ನಲ್ಲೇ ಟ್ವೀಟ್ ಮಾಡಿರುವ ಅವರು, ತಮ್ಮ ಸಂಪೂರ್ಣ ವೇತನವನ್ನು ಮಾದಕ ವ್ಯಸನಿಗಳ ಚಿಕಿತ್ಸೆ ಮತ್ತು ಅವರ ಪುನರ್ವಸತಿಗೋಸ್ಕರ ಬಳಸುವುದಾಗಿ ತಿಳಿಸಿದ್ದಾರೆ. ವಿಲ್ನಿಂದ ಪ್ರಾರಂಭಿಸುತ್ತೇನೆ ಎಂದಿರುವ ಅವರು, ಎಎಪಿ ಶಾಸಕಿ ಶ್ರೀಮತಿ ಜೀವನ್ ಜ್ಯೋತ್ ಕೌರ್ ಅವರ ಮಾರ್ಗದರ್ಶನದೊಂದಿಗೆ ಈ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರದೊಂದಿಗೆ ಒಗ್ಗಟ್ಟಿನಿಂದ ಕೆಲಸ ಮಾಡುವುದಾಗಿ ತಿಳಿಸಿರುವ ಅನ್ಮೋಲ್, ಸಂಪೂರ್ಣ ಪಾರದರ್ಶಕತೆಯಿಂದ ಪ್ರಕರಣ ಇತ್ಯರ್ಥ ಪಡಿಸುವುದಾಗಿ ತಿಳಿಸಿದ್ದಾರೆ. ವಕೀಲರಾಗಿ ಸುದೀರ್ಘ ಅನುಭವ ಹೊಂದಿರುವ ಅನ್ಮೋಲ್ ಈಗಾಗಲೇ ಕ್ರಿಮಿನಲ್, ನಾಗರಿಕ, ಭೂ ವಿವಾದ ಸೇರಿದಂತೆ ಅನೇಕ ಸೂಕ್ಷ್ಮ ವಿಷಯಗಳ ಪ್ರಕರಣ ಇತ್ಯರ್ಥ ಪಡಿಸಿರುವ ದಾಖಲೆ ಹೊಂದಿದ್ದಾರೆ.
ಇದನ್ನೂ ಓದಿ:ಮೊದಲ ಕ್ಯಾಬಿನೆಟ್ನಲ್ಲೇ ಭಗವಂತ್ ಮಾನ್ ಸರ್ಕಾರದ ದಿಟ್ಟ ನಡೆ.. 25 ಸಾವಿರ ಸರ್ಕಾರಿ ಹುದ್ದೆ ಭರ್ತಿಗೆ ಅಂಗೀಕಾರ
1958ರ ಮೇ, 1ರಂದು ರೈತ ಕುಟುಂಬದಲ್ಲಿ ಜನಿಸಿರುವ ಅನ್ಮೋಲ್ ರತ್ತನ್ ಸಿಧು, ಪಂಜಾಬ್ ವಿಶ್ವವಿದ್ಯಾಲಯದಿಂದ ಕಾನೂನು ವ್ಯಾಸಂಗ ಮಾಡಿದ್ದಾರೆ. 1981ರಿಂದ 1982ರವರೆಗೆ ಪಂಜಾಬ್ ವಿವಿಯಲ್ಲಿ ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷರಾಗಿದ್ದ ಇವರು, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದರು.