ಡೆಹ್ರಾಡೂನ್ (ಉತ್ತರಾಖಂಡ): ಉತ್ತರಾಖಂಡದ ಬಿಜೆಪಿ ಮುಖಂಡ ವಿನೋದ ಆರ್ಯ ಪುತ್ರನಿಗೆ ಸೇರಿದ ರೆಸಾರ್ಟ್ನಲ್ಲಿ ರಿಸೆಪ್ಷನಿಸ್ಟ್ (ಸ್ವಾಗತಗಾರ್ತಿ) ಅಂಕಿತಾ ಭಂಡಾರಿ ಹತ್ಯೆ ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ ಆರೋಪದಡಿ ಕಂದಾಯ ಅಧಿಕಾರಿ (ಪಟ್ವಾರಿ) ವೈಭವ್ ಪ್ರತಾಪ್ ಅವರನ್ನು ಅಮಾನತು ಮಾಡಲಾಗಿದೆ.
ರೆಸಾರ್ಟ್ನಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದ 19 ವರ್ಷದ ಅಂಕಿತಾ ಭಂಡಾರಿ ಸೆಪ್ಟೆಂಬರ್ 24ರಂದು ಶವವಾಗಿ ಪತ್ತೆಯಾಗಿದ್ದರು. ರೆಸಾರ್ಟ್ ಮಾಲೀಕರಾದ ವಿನೋದ ಆರ್ಯ ಮಗ ಪುಲ್ಕಿತ್ ಆರ್ಯ ಮತ್ತಿತರರು ಸೇರಿಕೊಂಡು ಕೊಲೆ ಮಾಡಿದ್ದರು.
ಇದನ್ನೂ ಓದಿ:ಅಂಕಿತಾ ಭಂಡಾರಿ ನೀರಿನಲ್ಲಿ ಮುಳುಗಿ ಸಾವು.. ತಾತ್ಕಾಲಿಕ ಮರಣೋತ್ತರ ಪರೀಕ್ಷೆ ವರದಿಗೆ ಪೋಷಕರ ಆಕ್ಷೇಪ
ಈ ಕೊಲೆಯನ್ನು ಸ್ವತಃ ಪುಲ್ಕಿತ್ ಆರ್ಯ ಕೂಡ ಒಪ್ಪಿಕೊಂಡಿದ್ದು, ಈಗಾಗಲೇ ರೆಸಾರ್ಟ್ ಮಾಲೀಕ ಪುಲ್ಕಿತ್ ಆರ್ಯ, ಮ್ಯಾನೇಜರ್ ಸೌರಭ್ ಭಾಸ್ಕರ್ ಮತ್ತು ಸಹಾಯಕ ವ್ಯವಸ್ಥಾಪಕ ಅಂಕಿತ್ ಗುಪ್ತಾ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಅದೇ ವೇಳೆ, ಈ ಕೊಲೆ ಪ್ರಕರಣದಲ್ಲಿ ಕಂದಾಯ ಅಧಿಕಾರಿಯಾದ ವೈಭವ್ ಪ್ರತಾಪ್ ಪಾತ್ರದ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಅಲ್ಲದೇ, ದಿಢೀರ್ ರಜೆ ಮೇಲೆ ವೈಭವ್ ಪ್ರತಾಪ್ ತೆರಳಿದ್ದರು. ಇದು ಅಂಕಿತಾ ಕುಟುಂಬಸ್ಥರು ಹಾಗೂ ವಿರೋಧ ಪಕ್ಷಗಳ ಆಕ್ರೋಶಕ್ಕೂ ಕಾರಣವಾಗಿತ್ತು. ಇದೀಗ ಪಟ್ವಾರಿ ವೈಭವ್ ಪ್ರತಾಪ್ ಅವರನ್ನು ಜಿಲ್ಲಾಧಿಕಾರಿ ವಿಜಯ್ ಕುಮಾರ್ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಜೊತೆಗೆ ಅಂಕಿತಾ ಭಂಡಾರಿ ನಾಪತ್ತೆಯಾಗಿರುವುದು ಗೊತ್ತಿದ್ದು, ಮಾಹಿತಿ ನೀಡದ ಕಾರಣ ಪಟ್ವಾರಿ ವೈಭವ್ ಪ್ರತಾಪ್ ಅವರನ್ನು ಅಮಾನತು ಮಾಡಲಾಗಿದೆ. ಈ ಕುರಿತು ತನಿಖೆಗೂ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ:ಅಂಕಿತಾ ಭಂಡಾರಿ ಕೊಲೆ ಪ್ರಕರಣ: ರೊಚ್ಚಿಗೆದ್ದ ಜನರಿಂದ ಬಿಜೆಪಿ ನಾಯಕನ ಪುತ್ರನ ಫ್ಯಾಕ್ಟರಿಗೆ ಬೆಂಕಿ