ಋಷಿಕೇಶ:ಉತ್ತರಾಖಂಡದ ಬಿಜೆಪಿ ನಾಯಕನ ಪುತ್ರ ಮತ್ತು ಅವರ ರೆಸಾರ್ಟ್ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಸಹಚರರು ಸೇರಿಕೊಂಡು ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದ ಅಂಕಿತಾ ಭಂಡಾರಿಯ ತಾತ್ಕಾಲಿಕ ಮರಣೋತ್ತರ ಪರೀಕ್ಷೆಯ ವರದಿ ಬಂದಿದೆ. ಅಂಕಿತಾ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಸಾವನ್ನಪ್ಪಿರುವುದಾಗಿ ಬಹಿರಂಗಪಡಿಸಿದೆ. ಅವರ ದೇಹದ ಮೇಲೆ ಹಲವಾರು ಗಾಯಗಳಿವೆ ಎಂದು ವರದಿ ಹೇಳಿದೆ.
ಋಷಿಕೇಶದ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ತಾತ್ಕಾಲಿಕ ವರದಿ ಬಿಡುಗಡೆ ಮಾಡಿದ್ದು, ದೇಹದ ಮೇಲೆ ಆಂಟಿಮಾರ್ಟಮ್ (ಸಾವಿಗೂ ಮುಂಚೆ ಆದ) ಗಾಯಗಳು ಕಂಡುಬಂದಿವೆ. ಇದು ವಸ್ತುವಿನಿಂದಾದ ಗಾಯಗಳು. ನೀರಿನಲ್ಲಿ ಮುಳುಗಿ ಉಸಿರುಗಟ್ಟಿರುವುದರಿಂದ ಸಾವನ್ನಪ್ಪಿರುವುದು ಪ್ರಾಥಮಿಕ ವರದಿಯಲ್ಲಿ ಕಂಡುಬಂದಿದೆ. ಗಾಯಗಳ ವಿವರಗಳು ಹಾಗೂ ಇತರ ಸಂಶೋಧನೆಗಳನ್ನು ಪೋಸ್ಟ್ ಮಾರ್ಟಮ್ ವರದಿಯಲ್ಲಿ ನೀಡಲಾಗುವುದು ಎಂದು ತಿಳಿಸಿದೆ. ನಾಲ್ವರು ವೈದ್ಯರ ತಂಡ ಶನಿವಾರ ಏಮ್ಸ್‌ನಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದೆ.
ಮೃತಳ ತಂದೆ ಮತ್ತು ಸಹೋದರ ಅಂತಿಮ ಮರಣೋತ್ತರ ಪರೀಕ್ಷೆಯ ವರದಿ ಬರುವವರೆಗೂ ಆಕೆಯ ಅಂತ್ಯಕ್ರಿಯೆ ನಡೆಸಲು ನಿರಾಕರಿಸಿದ್ದಾರೆ. "ತಾತ್ಕಾಲಿಕ ಮರಣೋತ್ತರ ಪರೀಕ್ಷೆಯ ವರದಿಯಿಂದ ನನಗೆ ತೃಪ್ತಿ ಇಲ್ಲ. ಅಂತಿಮ ವಿವರವಾದ ವರದಿಯನ್ನು ನಾವು ಪಡೆಯುವವರೆಗೆ ಆಕೆಯ ಅಂತ್ಯಕ್ರಿಯೆಯನ್ನು ನಡೆಸುವುದಿಲ್ಲ" ಎಂದು ಅಂಕಿತಾ ತಂದೆ ವೀರೇಂದ್ರ ಸಿಂಗ್ ಭಂಡಾರಿ ಹೇಳಿದ್ದಾರೆ.