ಹೃಷಿಕೇಶ: ರಿಸೆಪ್ಷನಿಸ್ಟ್ ಆಗಿದ್ದ ಯುವತಿ ಅಂಕಿತಾ ಕೊಲೆ ಪ್ರಕರಣದಲ್ಲಿ ಆಕೆಯ ಗೆಳೆಯ ಪುಷ್ಪದೀಪ್ ಎಂಬಾತನನ್ನು ಉತ್ತರಾಖಂಡ್ ವಿಶೇಷ ತನಿಖಾ ದಳ ಗುರುವಾರ ವಿಚಾರಣೆಗೊಳಪಡಿಸಿದೆ. ಈಗ ಎಸ್‌ಐಟಿ ಈತನನ್ನು ಪ್ರಕರಣದ ಮುಖ್ಯ ಆರೋಪಿ, ಉಚ್ಚಾಟಿತ ಬಿಜೆಪಿ ನಾಯಕ ವಿನೋದ್ ಆರ್ಯನ ಮಗ ಪುಲ್ಕಿತ್ ಆರ್ಯನ ಎದುರು ಹಾಜರುಪಡಿಸಿ ಅಡ್ಡವಿಚಾರಣೆ ನಡೆಸಲಿದೆ. ಅಲ್ಲದೇ ಎಸ್‌ಐಟಿ ಅಪರಾಧ ಕೃತ್ಯದ ಮರುಸೃಷ್ಟಿ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣದಲ್ಲಿ ಆರ್ಯನನ್ನು ಆತನ ಇಬ್ಬರು ಸಹಚರರೊಂದಿಗೆ ಈಗಾಗಲೇ ಬಂಧಿಸಲಾಗಿದೆ. ಅಂಕಿತಾ ಭಂಡಾರಿ ಸ್ನೇಹಿತ, ಜಮ್ಮುವಿನಲ್ಲಿ ಕೆಲಸ ಮಾಡುತ್ತಿರುವ ಪುಷ್ಪದೀಪ್ ಎಂಬಾತನನ್ನು ಎಸ್‌ಐಟಿ ಗುರುವಾರ ದಿನವಿಡೀ ವಿವರವಾಗಿ ವಿಚಾರಣೆ ನಡೆಸಿದ್ದು, ಹೇಳಿಕೆ ದಾಖಲಿಸಿಕೊಂಡಿದೆ. ಆರ್ಯ ಒಡೆತನದ, ಅಂಕಿತಾ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ವನಂತ್ರಾ ರೆಸಾರ್ಟ್‌ನಲ್ಲಿ ಸೆಪ್ಟೆಂಬರ್ 14-15 ರಂದು ಪುಷ್ಪದೀಪ್ ತಂಗಿದ್ದ ಎಂದು ತಿಳಿದು ಬಂದಿದೆ. ಸೆಪ್ಟೆಂಬರ್ 16 ರಂದು ಪುಷ್ಪದೀಪ್ ಜಮ್ಮುವಿಗೆ ಮರಳಿದ್ದ.