ವಾರಾಣಸಿ (ಉತ್ತರಪ್ರದೇಶ): ಇಲ್ಲಿನ ಸ್ವಾತಿ ಬಾಲಾನಿ ಎಂಬ ಯುವತಿ ಪ್ರಾಣಿ ಪ್ರಿಯೆಯಾಗಿದ್ದು, ಮೂಕ ಪ್ರಾಣಿಗಳಿಗಾಗಿ ತಮ್ಮ ಮನೆಯನ್ನೇ ಮೃಗಾಲಯವನ್ನಾಗಿ ಪರಿವರ್ತಿಸಿದ್ದಾರೆ. ನಗರದ ಸಿಕ್ರೌಲ್ ನಿವಾಸಿಯಾಗಿರುವ ಇವರು ತಮ್ಮ ಐಷಾರಾಮಿ ಮನೆಯನ್ನು ಮೃಗಾಲಯವನ್ನಾಗಿ ಮಾಡಿದ್ದಾರೆ. ಅವರ ಪ್ರಾಣಿಗಳ ಮೇಲಿನ ಪ್ರೀತಿಯನ್ನು ನೋಡಿ ಜನ 'ಮೋಗ್ಲಿ' ಎಂದೂ ಕರೆಯಲು ಪ್ರಾರಂಭಿಸಿದ್ದಾರೆ. ಇವರ ಮನೆಯಲ್ಲಿ ಅಂಗವಿಕಲವಾದ, ಗಾಯಗೊಂಡಿರುವ ಅಥವಾ ಯಾವುದೋ ಕಾಯಿಲೆಯಿಂದ ಮನೆಯಿಂದ ಹೊರಹಾಕಲ್ಪಟ್ಟ ಪ್ರಾಣಿಗಳಿವೆ ಎಂಬುದು ವಿಶೇಷ.
ಅವರ ಬಳಿ 2 ಹೋರಿಗಳಿವೆ, ಅದರಲ್ಲಿ ಒಂದು ಕುರುಡವಾಗಿದೆ ಅನ್ನೋದು ಗಮನಾರ್ಹ. ಅಷ್ಟೇ ಅಲ್ಲ, ಹದ್ದು, 25ಕ್ಕೂ ಹೆಚ್ಚು ದೇಶಿ ಹಾಗೂ ವಿದೇಶಿ ನಾಯಿಗಳಿವೆ. 13 ಬೆಕ್ಕುಗಳೂ ಇವೆ. ಎಲ್ಲ ಪ್ರಾಣಿಗಳಿಗೆ ಅವರು ವಿಭಿನ್ನ ಹೆಸರುಗಳನ್ನು ಇಟ್ಟಿದ್ದಾರೆ. ಸುಲ್ತಾನ್, ಲಡ್ಡು, ಚುನ್ನಿ, ಗಟ್ಟು, ರಾಕ್ಸಿ, ಕಾಳು, ರಾವಣ, ಶೇರಾ, ಸಬ್ಜಿ, ಮೀನು, ಜುಮ್ರೂ ಬರ್ಫಿ, ಲಿಸಾ, ಬುಲ್ಬುಲ್, ಜಿಮ್ಮಿ, ಮೈಕ್ರೋ ಮತ್ತು ಬೆರ್ರಿ ಎಂದು ನಾಯಿಗಳಿಗೆ ಹೆಸರು ಇಟ್ಟಿದ್ದಾರೆ. ಚುಲ್ಬುಲ್, ಜಾಕಿ, ಪಿಕ್ಸಿ, ಹನಿ, ಸುಲ್ಲಿ, ಬಿಲ್ಲು ಮತ್ತು ಜೋರ್ಡಾನ್ ಎಂದು ಬೆಕ್ಕುಗಳಿಗೆ ಹೆಸರು ಇಡುವ ಮೂಲಕ ಅವರನ್ನೆಲ್ಲ ತಮ್ಮ ಮನೆಯ ಸದಸ್ಯರಾನ್ನಾಗಿಸಿದ್ದಾರೆ ಈ ಸ್ವಾತಿ.. ಅಂದ ಹಾಗೆ ಇವರ ಮೃಗಾಲಯದಲ್ಲಿರುವ ಹದ್ದಿನ ಹೆಸರು ಚೀಲು.
ಇದರೊಂದಿಗೆ ಸ್ವಾತಿ ಮನೆಯ ಸಮೀಪ ವಾಸಿಸುವ ಬಿಡಾಡಿ ಪ್ರಾಣಿಗಳಿಗೂ ಆಹಾರ ನೀಡುತ್ತಾರೆ. ಮನೆಯ ಮೇಲ್ಛಾವಣಿಯಲ್ಲಿ ವಿವಿಧ ಪಕ್ಷಿಗಳ ಜೊತೆಗೆ ಹತ್ತಾರು ಪಾರಿವಾಳಗಳಿವೆ. ಕುಟುಂಬ ಮತ್ತು ಸ್ನೇಹಿತರ ಸಹಾಯದಿಂದ ಅವರು ಪ್ರಾಣಿಗಳನ್ನು ನೋಡಿಕೊಳ್ಳುತ್ತಾರೆ. ಸ್ವಾತಿಯ ತಾಯಿ ವೈದ್ಯಕೀಯ ವೃತ್ತಿಯಿಂದ ನಿವೃತ್ತರಾಗಿದ್ದಾರೆ.