ಮುಂಬೈ, ಮಹಾರಾಷ್ಟ್ರ:ಅಕ್ರಮ ಹಣ ವರ್ಗಾವಣೆ ಮತ್ತು ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಂದ ಬಂಧಿಸಲ್ಪಟ್ಟಿದ್ದ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ರನ್ನು ನವೆಂಬರ್ 6ರವರೆಗೆ ಇಡಿ ಕಸ್ಟಡಿಗೆ ನೀಡಲಾಗಿದೆ.
ವಿಶೇಷ ಪಿಎಂಎಲ್ಎ(Prevention of Money Laundering Act) ಕೋರ್ಟ್ ಆದೇಶ ನೀಡಿದ್ದು, ಇದರ ಜೊತೆಗೆ ಅನಿಲ್ ದೇಶಮುಖ್ ಜಾರಿ ನಿರ್ದೇಶನಾಲಯದ ಕಸ್ಟಡಿಯಲ್ಲಿರುವಾಗ ಮನೆ ಭೋಜನ ಮತ್ತು ಔಷಧಗಳಿಗೆ ಅನುಮತಿ ನೀಡಿದೆ.
ಅತ್ಯಂತ ಮುಖ್ಯವಾಗಿ ಅನಿಲ್ ದೇಶಮುಖ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆ ನಡೆಸಬೇಕಾದರೆ, ಅವರ ವಕೀಲರೂ ಕೂಡ ಸ್ಥಳದಲ್ಲಿ ಹಾಜರಿರಲು ಕೋರ್ಟ್ ಅನುಮತಿ ನೀಡಿದೆ.
ಸೋಮವಾರ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ 12 ಗಂಟೆಗಳ ಕಾಲ ವಿಚಾರಣೆಗೆ ಒಳಗಾಗಿದ್ದ ಅನಿಲ್ ದೇಶಮುಖ್, ತಡರಾತ್ರಿ ಬಂಧನಕ್ಕೆ ಒಳಗಾಗಿದ್ದರು. ಇದಾದ ನಂತರ ಅವರನ್ನು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪಿ ಬಿ ಜಾಧವ್ ಅವರ ಮುಂದೆ ಹಾಜರುಪಡಿಸಲಾಗಿತ್ತು.
ಜಾರಿ ನಿರ್ದೇಶನಾಲಯ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ವಾದಿಸಿದ್ದು, ಬಾರ್ ಮತ್ತು ಆರ್ಕೆಸ್ಟ್ರಾ ಮಾಲೀಕರಿಂದ ಅನಿಲ್ ದೇಶಮುಖ್ ಮತ್ತು ಅವರ ಕುಟುಂಬಸ್ಥರು ಸುಮಾರು 4.7 ಕೋಟಿ ರೂಪಾಯಿ ಹಣ ಸಂಗ್ರಹಿಸಿರುವ ಆರೋಪವಿದೆ ಎಂದಿದ್ದಾರೆ.