ಮುಂಬೈ:ಪ್ರತಿ ತಿಂಗಳು 100 ಕೋಟಿ ರೂ. ಹಣ ಸಂಗ್ರಹ ಮಾಡುವಂತೆ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆಗೆ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಒತ್ತಡ ಹೇರಿದ್ದರು ಎಂದು ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಆರೋಪ ಮಾಡಿದ್ದಾರೆ.
ಮುಂಬೈ ನಗರ ಪೊಲೀಸ್ ಆಯುಕ್ತರಾಗಿದ್ದ ಪರಮ್ ಬೀರ್ ಸಿಂಗ್ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಪತ್ರ ಬರೆದಿದ್ದಾರೆ.
ಪ್ರಮುಖವಾಗಿ ಬಾರ್ ಅಂಡ್ ರೆಸ್ಟೋರೆಂಟ್ಗಳಿಂದ 100 ಕೋಟಿ ರೂ. ಹಣ ವಸೂಲಿ ಮಾಡುವಂತೆ ಒತ್ತಡ ಹೇರಿದ್ದರು ಎಂದಿರುವ ಅವರು, ಸುಮಾರು 1,750 ಬಾರ್ ಹಾಗೂ ರೆಸ್ಟೋರೆಂಟ್ಗಳ ಮೇಲೆ ಟಾರ್ಗೆಟ್ ಮಾಡುವಂತೆ ಹೇಳಿದ್ದರು ಎಂದಿದ್ದಾರೆ. ಜತೆಗೆ ಪ್ರತಿ ಒಂದು ಕಡೆಯಿಂದ 2ರಿಂದ 3 ಲಕ್ಷ ಹಣ ಸಂಗ್ರಹ ಮಾಡಿದರೆ 40-50 ಕೋಟಿ ಆಗಲಿದ್ದು, ಉಳಿದ ಹಣ ಬೇರೆ ಮೂಲಗಳಿಂದ ಸಂಗ್ರಹ ಮಾಡುವಂತೆ ಸೂಚನೆ ನೀಡಿದ್ದರು ಎನ್ನಲಾಗಿದೆ.
ಆದರೆ ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪವನ್ನು ದೇಶ್ಮುಖ್ ಅಲ್ಲಗಳೆದಿದ್ದಾರೆ. ಇನ್ನು ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ಭಾರತೀಯ ಜನತಾ ಪಾರ್ಟಿ, ತಕ್ಷಣವೇ ದೇಶ್ಮುಖ್ ಅವರನ್ನ ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿದೆ. ಮುಂಬೈ ಪೊಲೀಸ್ ಅಧಿಕಾರಿಯಾಗಿದ್ದ ಸಚಿನ್ ವಾಜೆ ಹೆಸರು ಮುಖೇಶ್ ಅಂಬಾನಿ ಅವರ ಮನೆ ಮುಂದೆ ನಿಲ್ಲಿಸಿದ ಸ್ಫೋಟಕ ತುಂಬಿದ್ದ ವಾಹನ ಪ್ರಕರಣದಲ್ಲಿ ಕೇಳಿ ಬಂದಿದೆ.