ನವದೆಹಲಿ:ಜನರಲ್ ಬಿಪಿನ್ ರಾವತ್ ಅವರ ಅಕಾಲಿಕ ಸಾವಿನಿಂದಾಗಿ ತೆರವಾಗಿದ್ದ ಮೂರು ಸೇನಾಪಡೆಗಳ ಮುಖ್ಯಸ್ಥ(ಸಿಡಿಎಸ್) ಸ್ಥಾನಕ್ಕೆ ನಿವೃತ್ತ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ಅವರನ್ನು ಕೇಂದ್ರ ಸರ್ಕಾರ ಮಂಗಳವಾರ ನೇಮಿಸಿದೆ.
ಅನಿಲ್ ಚೌಹಾಣ್ ಅವರು ಕಳೆದ ವರ್ಷ ಪೂರ್ವ ಸೇನಾ ಕಮಾಂಡರ್ ಆಗಿ ನಿವೃತ್ತರಾಗಿದ್ದರು. ರಾಷ್ಟ್ರೀಯ ಭದ್ರತಾ ಮಂಡಳಿಯ ಮಿಲಿಟರಿ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದರು. ಸುಮಾರು 40 ವರ್ಷಗಳ ವೃತ್ತಿಜೀವನದಲ್ಲಿ ಲೆಫ್ಟಿನೆಂಟ್ ಜನರಲ್ ಚೌಹಾಣ್ ಅವರು ಹಲವಾರು ಕಮಾಂಡ್, ಸಿಬ್ಬಂದಿ ಮತ್ತು ಇನ್ಸ್ಟ್ರುಮೆಂಟಲ್ ನೇಮಕಾತಿಗಳನ್ನು ಹೊಂದಿದ್ದಾರೆ. ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ಭಾರತದ ಬಂಡಾಯ ದಮನ ಕಾರ್ಯಾಚರಣೆಗಳಲ್ಲಿ ವ್ಯಾಪಕ ಅನುಭವವನ್ನು ಹೊಂದಿದ್ದಾರೆ.
ಮೇ 18, 1961 ರಂದು ಜನಿಸಿದ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ಅವರು 1981 ರಲ್ಲಿ ಭಾರತೀಯ ಸೇನೆಯ 11 ಗೂರ್ಖಾ ರೈಫಲ್ಸ್‌ಗೆ ನಿಯೋಜಿಸಲ್ಪಟ್ಟರು. ಖಡಕ್ವಾಸ್ಲಾದ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ಡೆಹ್ರಾಡೂನ್‌ನ ಇಂಡಿಯನ್ ಮಿಲಿಟರಿ ಅಕಾಡೆಮಿಯ ಹಳೆಯ ವಿದ್ಯಾರ್ಥಿಯಾಗಿದ್ದಾರೆ. ಹಲವಾರು ಸೇನಾ ವಿಭಾಗಗಳಲ್ಲಿ ಸೇವೆ ಸಲ್ಲಿಸಿರುವ ಅನಿಲ್ ಚೌಹಾಣ್ ಅವರು 2021ರ ಮೇ 31 ರಂದು ಭಾರತೀಯ ಸೇನೆಯಿಂದ ನಿವೃತ್ತರಾಗಿದ್ದರು.
ಸಂದ ಪ್ರಶಸ್ತಿಗಳು:ನಿವೃತ್ತ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ಅವರ ಸೇನೆಯಲ್ಲಿನ ವಿಶಿಷ್ಟ ಸೇವೆಗಾಗಿ ಪರಮ ವಿಶಿಷ್ಟ ಸೇವಾ ಪದಕ, ಉತ್ತಮ ಯುದ್ಧ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ, ಸೇನಾ ಪದಕ ಮತ್ತು ವಿಶಿಷ್ಟ ಸೇವಾ ಪದಕಗಳನ್ನು ನೀಡಿ ಗೌರವಿಸಲಾಗಿದೆ.