ಅಮರಾವತಿ(ಆಂಧ್ರಪ್ರದೇಶ): ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರದ ಎಲ್ಲ 24 ಸಚಿವರು ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಚಿವ ಸಂಪುಟ ಸಭೆ ನಡೆದ ಬೆನ್ನಲ್ಲೇ ಎಲ್ಲ ಮಂತ್ರಿಗಳು ತಮ್ಮ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಕೆ ಮಾಡಿದ್ದಾರೆ. ಇದೀಗ ರಾಜ್ಯಪಾಲರಿಗೆ ಅವುಗಳನ್ನು ರವಾನೆ ಮಾಡುವ ಸಾಧ್ಯತೆ ಇದೆ.
ಆಂಧ್ರಪ್ರದೇಶದ ಎಲ್ಲ ಸಚಿವರು ರಾಜೀನಾಮೆ: ಏ.11ರಂದು ನೂತನ ಸಚಿವ ಸಂಪುಟ ರಚನೆ - ಜಗನ್ ಮೋಹನ್ ರೆಡ್ಡಿ ಸಚಿವ ಸಂಪುಟ
ನೂತನ ಸಚಿವ ಸಂಪುಟ ಪುನರ್ ರಚನೆ ಮಾಡುವ ಉದ್ದೇಶದಿಂದ ಆಂಧ್ರಪ್ರದೇಶ ಎಲ್ಲ 24 ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.

ನೂತನವಾಗಿ ಸಚಿವ ಸಂಪುಟ ಪುನರ್ ರಚನೆ ಮಾಡುವ ಉದ್ದೇಶದಿಂದ ಎಲ್ಲ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಏಪ್ರಿಲ್ 11ರಂದು ಹೊಸ ಸಚಿವರು ಜಗನ್ ಸಂಪುಟ ಸೇರ್ಪಡೆಗೊಳ್ಳಲಿದ್ದಾರೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, ಈಗಾಗಲೇ ಜಗನ್ ಸಂಪುಟದಲ್ಲಿರುವ ಕೇವಲ ನಾಲ್ವರು ಮರಳಿ ಮಂತ್ರಿಸ್ಥಾನ ಪಡೆದುಕೊಳ್ಳಲಿದ್ದು, ಉಳಿದಂತೆ ಎಲ್ಲ ಹೊಸ ಮುಖಗಳಿಗೆ ಅವಕಾಶ ನೀಡುವ ಸಾಧ್ಯತೆ ದಟ್ಟವಾಗಿದೆ. ವಿಶೇಷವೆಂದರೆ 2024ರಲ್ಲಿ ಆಂಧ್ರಪ್ರದೇಶ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಅದನ್ನ ಗಮನದಲ್ಲಿಟ್ಟುಕೊಂಡು ಸಚಿವ ಸಂಪುಟ ಪುನರ್ರಚನೆಯಾಗಲಿದೆ.
2019ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿರುವ ಜಗನ್ ಮೋಹನ್ ಎರಡೂವರೆ ವರ್ಷಗಳ ಬಳಿಕ ತಮ್ಮ ಸಚಿವ ಸಂಪುಟ ಪುನರ್ ರಚನೆ ಮಾಡ್ತಿದ್ದು, ಜಾತಿ ಲೆಕ್ಕಾಚಾರ ಪ್ರಾಮುಖ್ಯತೆ ಪಡೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. 2021ರಲ್ಲಿ ಜಗನ್ ಮೋಹನ್ ರೆಡ್ಡಿ ಸಂಪುಟ ಪುನರ್ ರಚನೆಯಾಗಬೇಕಾಗಿತ್ತು. ಆದರೆ, ಕೋವಿಡ್ ಕಾರಣದಿಂದಾಗಿ ಇದನ್ನ ಮುಂದೂಡಿಕೆ ಮಾಡಲಾಗಿತ್ತು. ಇಂದಿನ ಸಚಿವ ಸಂಪುಟದಲ್ಲಿ ಪದವಿ ಕಾಲೇಜುಗಳ ಬೋಧಕ ಮತ್ತು ಬೋಧಕೇತರ ಹುದ್ದೆ ಬದಲಾವಣೆಗೆ ಅವಕಾಶ ನೀಡಲಾಗಿದ್ದು, ಪಂಚಾಯತ್ ರಾಜ್ ಕಾನೂನು ತಿದ್ದುಪಡಿ ಸುಗ್ರೀವಾಜ್ಞೆಗೆ ಸಂಪುಟ ಅನುಮೋದನೆ ನೀಡಿದೆ.