ಕಡಪ:ರಾಜ್ಯದಲ್ಲಿ ರಕ್ತ ಚಂದನ ಮರವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ರೆಡ್ ಸ್ಯಾಂಡರ್ಸ್ ಗ್ಯಾಂಗ್ನ್ನು ಆಂಧ್ರ ಪೊಲೀಸರು ಸೆರೆ ಹಿಡಿದಿದ್ದಾರೆ.
ಅಂತಾರಾಷ್ಟ್ರೀಯ ಸ್ಮಗ್ಲರ್ ಭಾಸ್ಕರನ್ ಸೇರಿದಂತೆ 17 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 1.3 ಟನ್ ರಕ್ತ ಚಂದನದ ಮರಗಳು, ಎರಡು ಕಾರು, ಎರಡು ಬೈಕ್, 290 ಗ್ರಾಂ ಚಿನ್ನದ ಆಭರಣ, 1 ಪಿಸ್ತೂಲ್ ಮತ್ತು ಐದು ಸಜೀವ ಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಡಪ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‌ಪಿ ಕೆಕೆಎನ್ ಅಂಬುರಾಜನ್, 2016 ರಿಂದ ಕಡಪ, ಚಿತ್ತೂರು ಮತ್ತು ನೆಲ್ಲೂರು ಜಿಲ್ಲೆಗಳಲ್ಲಿ ಗ್ಯಾಂಗ್ ರಚಿಸಿಕೊಂಡು ರಕ್ತ ಚಂದನ ಮರಗಳ ಕಳ್ಳಸಾಗಾಣಿಕೆ ಮಾಡುತ್ತಿದ್ದ ಅಂತಾರಾಷ್ಟ್ರೀಯ ಸ್ಮಗ್ಲರ್ ಭಾಸ್ಕರನ್ನನ್ನು ಬಂಧಿಸಿದ್ದೇವೆ. ಈ ಗ್ಯಾಂಗ್ ವಿಶೇಷವಾಗಿ ತಮಿಳುನಾಡು ಮತ್ತು ಕರ್ನಾಟಕದಿಂದ ಕಳ್ಳಸಾಗಣೆ ಮಾಡುತ್ತಿತ್ತು ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.
ಕಳೆದ 3 ವರ್ಷಗಳಿಂದ ಆರೋಪಿಗಳು ಆಂಧ್ರಪ್ರದೇಶದಲ್ಲಿ ರಕ್ತ ಚಂದನ ಮರಗಳ ಕಳ್ಳಸಾಗಾಣಿಕೆಯಲ್ಲಿ ಭಾಗಿಯಾಗಿದ್ದರು. ಆರೋಪಿಗಳು ಚಿತ್ತೂರು ಮತ್ತು ನೆಲ್ಲೂರು ಜಿಲ್ಲೆಗಳಲ್ಲಿನ ಕಳ್ಳಸಾಗಾಣಿಕೆದಾರರೊಂದಿಗೆ ಸಂಪರ್ಕ ಬೆಳೆಸಿಕೊಂಡು ಅಮೂಲ್ಯವಾದ ಮರಗಳನ್ನು ಕಡಿದು ರಾಜ್ಯದ ಇತರ ಪ್ರದೇಶಗಳಿಗೆ ಅಕ್ರಮವಾಗಿ ಸಾಗಿಸುತ್ತಿದ್ದರು. ಇದರ ಬಗ್ಗೆ ಮಾಹಿತಿ ಪಡೆದ ಪೊಲೀಸರು ಗ್ಯಾಂಗ್ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಎಸ್‌ಪಿ ಹೇಳಿದರು.
ಭಾಸ್ಕರನ್ ಹಲವಾರು ಅಂತಾರಾಷ್ಟ್ರೀಯ ಕಳ್ಳಸಾಗಾಣಿಕೆದಾರರೊಂದಿಗೆ ಸಹ ಸಂಬಂಧ ಹೊಂದಿದ್ದಾನೆ ಎಂಬ ಮಾಹಿತಿ ಇದೆ. ಈ ಹಿಂದೆ ಈತನನ್ನು ಚೆನ್ನೈ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದರು. ಜೈಲಿನಿಂದ ಬಿಡುಗಡೆಯಾದ ನಂತರ ಆತ ಮತ್ತೆ ರಕ್ತ ಚಂದನ ಮರಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಎಂದು ಎಸ್‌ಪಿ ಹೇಳಿದರು.