ಅಮರಾವತಿ (ಆಂಧ್ರಪ್ರದೇಶ) :ಆಂಧ್ರಪ್ರದೇಶದ ವಿಜಯನಗರ ಜಿಲ್ಲೆಯ ಕಂಟಕಪಲ್ಲಿ ಎಂಬಲ್ಲಿ ಭಾನುವಾರ ಸಂಜೆ ನಡೆದ ಭೀಕರ ರೈಲು ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆ ಆಗಿದೆ. ಅಪಘಾತದಲ್ಲಿ 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಅಪಘಾತದಲ್ಲಿ ಇಬ್ಬರು ಲೋಕೋ ಪೈಲೆಟ್ಗಳು ಸಾವನ್ನಪ್ಪಿದ್ದಾರೆ. ರೈಲು ಅಪಘಾತದ ಸಂಬಂಧ 12 ರೈಲುಗಳ ಸಂಚಾರ ರದ್ದಾಗಿದ್ದು, ಕೆಲವು ರೈಲುಗಳ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ.
ರೈಲು ಅಪಘಾತ ಸಂಬಂಧ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಆಂಧ್ರ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ಜೊತೆ ಮಾತುಕತೆ ನಡೆಸಿದ್ದು, ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ. ಜೊತೆಗೆ ಸಂತ್ರಸ್ತರಿಗೆ ಪರಿಹಾರ ಒದಗಿಸುವ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದು ಸಿಎಂ ಕಚೇರಿ ತಿಳಿಸಿದೆ. ಸರ್ಕಾರದ ವತಿಯಿಂದ ಮೃತರ ಕುಟುಂಬಸ್ಥರಿಗೆ 10 ಲಕ್ಷ ಪರಿಹಾರ ಹಾಗೂ ಗಂಭೀರ ಗಾಯಗೊಂಡವರ ಕುಟುಂಬಸ್ಥರಿಗೆ 2 ಲಕ್ಷ ರೂ ಪರಿಹಾರ ನೀಡಲಾಗುತ್ತದೆ. ಜೊತೆಗೆ ಬೇರೆ ರಾಜ್ಯದ ಮೃತ ಪ್ರಯಾಣಿಕರಿಗೆ 2 ಲಕ್ಷ ರೂ ಪರಿಹಾರ ಹಾಗೂ ಗಂಭೀರ ಗಾಯಗೊಂಡವರಿಗೆ 50 ಸಾವಿರ ರೂ ಪರಿಹಾರ ನೀಡಲಾಗುತ್ತದೆ ಎಂದು ಹೇಳಿದೆ.
ವಿಜಯನಗರ ಜಿಲ್ಲೆಯ ಕಂಟಕಪಲ್ಲಿಯಲ್ಲಿ ನಡೆದ ರೈಲು ಅಪಘಾತ ಸಂಬಂಧ ಆಂಧ್ರ ಸಿಎಂ ಜಗನ್ ಅವರು ವಿಷಾದ ವ್ಯಕ್ತಪಡಿಸಿದ್ದಾರೆ. ಈಗಾಗಲೇ ರಕ್ಷಣಾ ಕಾರ್ಯಾಚರಣೆ ಮತ್ತು ಪರಿಹಾರ ಒದಗಿಸುವ ಕಾರ್ಯ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜೊತೆಗೆ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಹೇಳಿದೆ. ಜೊತೆಗೆ ರೈಲು ಅಪಘಾತ ಸಂತ್ರಸ್ತರಿಗೆ ಚಿಕಿತ್ಸೆ ನೀಡಲು ಸುತ್ತಮುತ್ತಲಿನ ಜಿಲ್ಲೆಗಳಾದ ವಿಶಾಖಪಟ್ಟಣಂ, ಅನಕಪಲ್ಲಿ ಸೇರಿದಂತೆ ಹಲವು ಜಿಲ್ಲೆಗಳಿಂದ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡುವಂತೆ ತಿಳಿಸಲಾಗಿದೆ. ಜೊತೆಗೆ ಘಟನೆ ಸಂಬಂಧ ಇಂಚಿಂಚೂ ಮಾಹಿತಿಯನ್ನು ಸಿಎಂ ಅವರಿಗೆ ನೀಡಲಾಗುತ್ತಿದೆ ಎಂದು ಕಚೇರಿ ತಿಳಿಸಿದೆ.