ಅನ್ನಮಯ್ಯ (ಆಂಧ್ರಪ್ರದೇಶ): ಆಂಧ್ರಪ್ರದೇಶದಲ್ಲಿ ಅಮಾನವೀಯ ಮತ್ತು ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಕಲುಷಿತ ನೀರು ಕುಡಿದು ಸಾವನ್ನಪ್ಪಿದ್ದ ಮೂವರು ಕಾರ್ಮಿಕರ ಮೃತದೇಹಗಳನ್ನು ರಸ್ತೆ ಪಕ್ಕದ ಕಣಿವೆಯಲ್ಲಿ ಎಸೆಯಲಾಗಿದ್ದು, ಈ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.
ಚೆಂಚಯ್ಯ (60), ಚೆಂಚುರಾಮಯ್ಯ (25) ಮತ್ತು ಭಾರತಿ (25) ಎಂಬುವವರೇ ಮೃತ ಕಾರ್ಮಿಕರು ಎಂದು ಗುರುತಿಸಲಾಗಿದೆ. ಈ ಮೂವರ ಮೃತದೇಹಗಳು ಜುಲೈ 13ರಂದು ಕಡಪಾ ಜಿಲ್ಲೆಯ ಗುವ್ವಲಚೆರುವು ಗ್ರಾಮದ ಬಳಿಯ ಕಣಿವೆಯಲ್ಲಿ ಪತ್ತೆಯಾಗಿದ್ದವು. ಮೂರೂ ಮೃತದೇಹಗಳು ಕೊಳೆತ ಸ್ಥಿತಿಯಲ್ಲಿದ್ದು ಗುರುತಿಸಲು ಸಹ ಸಾಧ್ಯವಾಗುತ್ತಿರಲಿಲ್ಲ.
ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿಸಿದ್ದರು. ಈ ವೇಳೆ ಮೃತರಲ್ಲಿ ಒಬ್ಬ ಧರಿಸಿದ್ದ ಶರ್ಟ್‌ನ ಕಾಲರ್‌ನಲ್ಲಿ ಟೈಲರ್ ಲೇಬಲ್ನಲ್ಲಿ ರಾಯಚೋಟಿ ವಿಳಾಸ ಇತ್ತು. ಮತ್ತೊಬ್ಬ ವ್ಯಕ್ತಿ ಬೆಳ್ಳಿ ಸರ ಧರಿಸಿದ್ದರೆ, ಮಹಿಳೆ ನೈಟಿ ಧರಿಸಿದ್ದರು. ಇದರ ಆಧಾರ ಮೇಲೆಯೇ ಪೊಲೀಸರು ತನಿಖೆ ಶುರು ಮಾಡಿದಾಗ ಆಘಾತಕಾರಿ ಅಂಶಗಳು ಬಯಲಿಗೆ ಬಂದಿವೆ.
ಕಲುಷಿತ ನೀರು ಕುಡಿದು ಮೃತಪಟ್ಟ ಮೂವರು: ಕಾರ್ಮಿಕರ ಶವಗಳನ್ನು ರಸ್ತೆಯ ಪಕ್ಕದ ಕಣಿವೆಗೆ ಎಸೆದ್ರು! ಶವಗಳ ಸ್ವೀಕರಿಸಲು ನಿರಾಕರಿಸಿದ್ದ ಗ್ರಾಮಸ್ಥರು: ಹದಿನೈದು ದಿನಗಳ ಹಿಂದೆ ಬಸವಯ್ಯ ಎಂಬ ಗುತ್ತಿಗೆದಾರ 13 ಮೇಸ್ತ್ರಿಗಳನ್ನು ಇದ್ದಿಲು ತಯಾರಿಕೆಗಾಗಿ ರಾಯಚೋಟಿಯಿಂದ ಕರ್ನಾಟಕದ ಕಲಬುರಗಿಗೆ ಕರೆದೊಯ್ದಿದ್ದರು. ಅಲ್ಲಿಗೆ ಹೋಗಿದ್ದ ಕೆಲವು ಮೇಸ್ತ್ರಿಗಳು ಬಾವಿಯ ನೀರು ಕುಡಿದ ನಂತರ ಭೇದಿ ಕಾಣಿಸಿಕೊಂಡಿತ್ತು. ಅಂತೆಯೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ವೈದ್ಯರು ಸ್ವಗ್ರಾಮಕ್ಕೆ ಮರಳುವಂತೆ ಸೂಚಿಸಿದ್ದರು ಎನ್ನಲಾಗಿದೆ.
ಅಲ್ಲಿಂದ ಗ್ರಾಮಕ್ಕೆ ಬರಬೇಕಾದರೆ ಚೆಂಚಯ್ಯ, ಚೆಂಚುರಾಮಯ್ಯ ಮತ್ತು ಭಾರತಿ ಮೃತಪಟ್ಟಿದ್ದಾರೆ. ಏಕಕಾಲಕ್ಕೆ ಮೂವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸಾಂಕ್ರಾಮಿಕ ರೋಗದ ಭೀತಿ ಶುರುವಾಗಿದೆ. ಇದರಿಂದ ಹೆದರಿದ ಗ್ರಾಮಸ್ಥರು ಶವಗಳನ್ನು ಗ್ರಾಮಕ್ಕೆ ತರಬೇಡಿ ಎಂದು ಬಸವಯ್ಯಗೆ ಹೇಳಿದ್ದರು. ಆದ್ದರಿಂದ ಮೂವರು ಶವಗಳನ್ನು ವೈಎಸ್ಆರ್ ಮತ್ತು ಅನ್ನಮಯ್ಯ ಜಿಲ್ಲೆಗಳ ಗಡಿಯಲ್ಲಿರುವ ಕಣಿವೆಗೆ ಎಸೆಯಲಾಗಿತ್ತು ಎಂಬುವುದು ಪೊಲೀಸರು ತನಿಖೆಯಲ್ಲಿ ತಿಳಿದು ಬಂದಿದೆ.
ಬಸವಯ್ಯನ ಪತ್ತೆಗೆ ಶೋಧ:ಈ ಕಾರ್ಮಿಕರ ಸಾವಿನ ಪ್ರಕರಣದಲ್ಲಿ ಗುತ್ತಿಗೆದಾರ ಬಸವಯ್ಯ ನಿರ್ಲಕ್ಷ್ಯ ತೋರಿದ್ದಾರೆ ಎಂದೂ ಪೊಲೀಸರು ಶಂಕಿಸಿದ್ದಾರೆ. ಸದ್ಯ ತಲೆ ಮರೆಸಿಕೊಂಡಿರುವ ಬಸವಯ್ಯನ ಪತ್ತೆಗೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.
ಇದನ್ನೂ ಓದಿ:ಹರಿಯಾಣ,ಜಾರ್ಖಂಡ್ ಬೆನ್ನಲ್ಲೇ ಗುಜರಾತ್ನಲ್ಲೂ ದುಷ್ಕೃತ್ಯ.. ಕಾನ್ಸ್ಟೇಬಲ್ ಮೇಲೆ ಟ್ರಕ್ ಹತ್ತಿಸಿ ಕೊಲೆ