ನೆಲ್ಲೂರು(ಆಂಧ್ರಪ್ರದೇಶ):ಲಿಂಗ ಪರಿವರ್ತನೆಗೆ ಮುಂದಾಗಿದ್ದ ವ್ಯಕ್ತಿಯೊಬ್ಬನಿಗೆ ಲಾಡ್ಜ್ನಲ್ಲಿ ಬಿ. ಫಾರ್ಮಸಿ ವಿದ್ಯಾರ್ಥಿಗಳು ಶಸ್ತ್ರಚಿಕಿತ್ಸೆ ಮಾಡಿದ್ದು, ಈ ವೇಳೆ, ತೀವ್ರ ರಕ್ತಸ್ರಾವವಾಗಿ ಆತ ಸಾವನ್ನಪ್ಪಿದ್ದಾನೆ. ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಈ ಘಟನೆ ನಡೆದಿದೆ.
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಪ್ರಕಾಶಂ ಜಿಲ್ಲೆಯ ಜರುಗುಮಲ್ಲಿ ಮಂಡಲದ ಕಾಮೆಪಲ್ಲಿ ಗ್ರಾಮದ ನಿವಾಸಿ ಶ್ರೀಕಾಂತ್ ಕಳೆದ ಕೆಲ ವರ್ಷಗಳ ಹಿಂದೆ ಅಮೂಲ್ಯ ಎಂಬ ಯುವತಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ, ಕಳೆದ ಆರು ತಿಂಗಳ ಹಿಂದೆ ಅಮೂಲ್ಯಾ ಗಂಡನನ್ನ ಬಿಟ್ಟು ಹೋಗಿದ್ದಳು. ಇದಾದ ಬಳಿಕ ಒಂಗೋಲ್ನಲ್ಲಿ ವಾಸ ಮಾಡಲು ಶುರು ಮಾಡಿದ್ದ. ಈತನಿಗೆ ವಿಶಾಖಪಟ್ಟಣಂದ ಅಶೋಕ್ ಎಂಬಾತ ಪರಿಚಯವಾಗಿದ್ದ. ಆರು ತಿಂಗಳ ನಂತರ ಮೊಬೈಲ್ ಆ್ಯಪ್ ಮೂಲಕ ನೆಲ್ಲೂರಿನಲ್ಲಿರುವ ಖಾಸಗಿ ಕಾಲೇಜಿನಲ್ಲಿ ಬಿ.ಫಾರ್ಮಸಿಯ 4ನೇ ವರ್ಷದ ವಿದ್ಯಾರ್ಥಿಗಳಾದ ಎ.ಮಸ್ತಾನ್, ಜೀವಾ ಇವರಿಗೆ ಪರಿಚಯವಾಗಿದ್ದರು.
ಇದನ್ನೂ ಓದಿರಿ:ದೇಶ ರಕ್ಷಣೆ ಮೊದಲ ಆದ್ಯತೆ: ಉಕ್ರೇನ್ ಸೇನೆಯಲ್ಲಿ ಮಾಜಿ ವಿಶ್ವ ಚಾಂಪಿಯನ್ ಬಾಕ್ಸರ್ ವಿಟಾಲಿ!
ಇವರ ನಡುವೆ ಆತ್ಮೀಯತೆ ಬೆಳೆಯುತ್ತಿದ್ದಂತೆ ಶ್ರೀಕಾಂತ್ ಮುಂಬೈಗೆ ಹೋಗಿ ಲಿಂಗ ಪರಿವರ್ತನೆ ಮಾಡಿಸುವ ಶಸ್ತ್ರಚಿಕಿತ್ಸೆಗೊಳಗಾಗುವುದಾಗಿ ಮಸ್ತಾನ್ ಮುಂದೆ ಹೇಳಿದ್ದರು. ಈ ವೇಳೆ, ಅದಕ್ಕಾಗಿ ಲಕ್ಷಗಟ್ಟಲೆ ಹಣ ಖರ್ಚಾಗುತ್ತದೆ ಎಂದು ಮಸ್ತಾನ್, ಜೀವಾ ತಿಳಿಸಿದ್ದರು. ಜೊತೆಗೆ ತಾವು ಬಿ. ಫಾರ್ಮಸಿ ವಿದ್ಯಾರ್ಥಿಗಳಾಗಿದ್ದು, ಕಡಿಮೆ ಹಣದಲ್ಲಿ ಶಸ್ತ್ರಚಿಕಿತ್ಸೆ ಮಾಡುವ ಭರವಸೆ ನೀಡಿದ್ದರು.
ಲಾಡ್ಜ್ನಲ್ಲಿ ಶ್ರೀಕಾಂತ್ಗೆ ಶಸ್ತ್ರಚಿಕಿತ್ಸೆ:ಫೆ. 23ರಂದು ನೆಲ್ಲೂರಿನಲ್ಲಿರುವ ಲಾಡ್ಜ್ವೊಂದರಲ್ಲಿ ಬಾಡಿಗೆ ರೂಂ ಮಾಡಿ, ಶ್ರೀಕಾಂತ್ಗೆ ಶಸ್ತ್ರಚಿಕಿತ್ಸೆ ಮಾಡಲು ಮುಂದಾಗಿದ್ದರು. ಜನನಾಂಗ ತೆಗೆದು ಹಾಕುವ ವೇಳೆ ತೀವ್ರ ರಕ್ತಸ್ರಾವವಾಗಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇದರ ಬೆನ್ನಲ್ಲೇ ಎಲ್ಲರೂ ಸ್ಥಳದಿಂದ ಪರಾರಿಯಾಗಿದ್ದಾರೆ. ಇದರ ಬಗ್ಗೆ ಲಾಡ್ಜ್ ಸಿಬ್ಬಂದಿಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ.