ಅಮರಾವತಿ:ತಲಾಖ್, ತಲಾಖ್, ತಲಾಖ್ ಎಂದು ಮೂರು ಬಾರಿ ಹೇಳಿ ನೀಡುವ ವಿಚ್ಚೇದನವನ್ನು ಕೇಂದ್ರ ಸರ್ಕಾರ ರದ್ದು ಮಾಡಿದೆ. ಅದನ್ನು ಬರೆದು ನೀಡುವ ತಲಾಖ್ ಕೂಡ ಅಮಾನ್ಯ ಡಿವೋರ್ಸ್ ಕೂಡ ಅಸಿಂಧು ಎಂದು ಆಂಧ್ರಪ್ರದೇಶ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಇಸ್ಲಾಮಿಕ್ ಕಾನೂನು ನಿಯಮಗಳ ಪ್ರಕಾರ, ದಂಪತಿ ಮಧ್ಯೆ ರಾಜೀ ಸಂಧಾನ ಮಾಡಿಸಬೇಕು ಎಂದು ಅದು ಹೇಳಿದೆ.
ಮೂರು ಬಾರಿ "ತಲಾಖ್" ಎಂದು ಬರೆದು ರಿಜಿಸ್ಟರ್ಡ್ ಪೋಸ್ಟ್ ಮೂಲಕ ಕಳುಹಿಸಿದ ವಿಚ್ಚೇದನ ಪತ್ರದ ವಿರುದ್ಧ ಮಹಿಳೆ ಸಲ್ಲಿಸಿದ ಅರ್ಜಿಯ ವಿಚಾರಣೆಯಲ್ಲಿ ಆಂಧ್ರಪ್ರದೇಶ ಹೈಕೋರ್ಟ್ ಈ ತೀರ್ಪು ನೀಡಿದೆ.
ತಲಾಖ್ ಎಂದು ಹೇಳುವ ಬದಲಾಗಿ ಅದನ್ನು ಅಕ್ಷರ ರೂಪದಲ್ಲಿ ಬರೆದು ನೀಡುವ ವಿಚ್ಚೇದನ ಊರ್ಜಿತವಾಗುವುದಿಲ್ಲ. ಹಾಗೆ ಬರೆಯುವುದು ಮುಸ್ಲಿಂ ಕಾನೂನು ವಿರುದ್ಧವಾಗಿದೆ. ಅಂತಹ ತಲಾಖ್ನಿಂದ ಮದುವೆಯನ್ನು ರದ್ದು ಮಾಡಲು ಬರುವುದಿಲ್ಲ. ಮಧ್ಯವರ್ತಿಗಳು ಇದರ ಹೊಣೆ ಹೊತ್ತು ಇಬ್ಬರ ಪರವಾಗಿ ರಾಜಿ ಮಾಡಿಸಬೇಕು ಎಂದು ಹೇಳಿದೆ.
ಒಂದು ವೇಳೆ ಇದು ಸಾಧ್ಯವಾಗದಿದ್ದಲ್ಲಿ, ಸಮಂಜಸ ಕಾರಣ ನೀಡಿ ಮೂರು ಬಾರಿ ತಲಾಖ್ ನೀಡಬೇಕು. ಪತಿ ತಲಾಖ್ ಹೇಳುವ ಮೊದಲು ಈ ಬಗ್ಗೆ ಪತ್ನಿಗೆ ಮಾಹಿತಿ ನೀಡಬೇಕು. ಅಲ್ಲದೇ, ಒಂದು ತಲಾಖ್ ಉಚ್ಚರಿಸುವ ಮೊದಲು ಎರಡನೇ ತಲಾಖ್ ಎನ್ನುವ ಮಧ್ಯೆ ಸಮಯ ನೀಡಬೇಕು. ಈ ವೇಳೆ ಸಕಾರಣಗಳನ್ನು ನೀಡಬೇಕು. ಒಂದೇ ಉಸಿರಿಗೆ ತಲಾಖ್ ನೀಡುವುದು ಅಸಾಂವಿಧಾನಿಕವಾಗಿದೆ ಎಂದು "ಶ್ಯಾರಾ ಬಾನೋ ಪ್ರಕರಣ"ದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಇಲ್ಲಿ ಉಲ್ಲೇಖಿಸಲಾಗಿದೆ.
ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ತಲಾಖ್ ಎಂದು ಮೂರು ಬಾರಿ ಬರೆದು ರಿಜಿಸ್ಟರ್ಡ್ ಪೋಸ್ಟ್ ಮಾಡಿ ವಿಚ್ಚೇದನ ನೀಡಿದ್ದ. ಇದನ್ನು ಧಿಕ್ಕರಿಸಿದ್ದ ಮಹಿಳೆ, ಪತಿ ಯಾವುದೇ ಕಾರಣ ನೀಡದೇ ವಿಚ್ಚೇದನ ನೀಡಿದ್ದನ್ನು ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಕೋರ್ಟ್ ಪತಿ ನೀಡಿದ ತಲಾಖ್ ಸಮಂಜಸವಾಗಿಲ್ಲ. ಅವರ ಪತ್ನಿಯಾಗಿಯೇ ಮುಂದುವರಿಯುತ್ತಾರೆ. ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿರುವುದರಿಂದ ಜೀವನಾಂಶಕ್ಕೆ ಅರ್ಹಳು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಹೈಕೋರ್ಟ್ ನ್ಯಾಯಮೂರ್ತಿ ರವಿನಾಥ್ ತಿಲಹಾರಿ ಅವರು ಈ ತೀರ್ಪು ನೀಡಿದ್ದಾರೆ.
ಓದಿ;ತೈವಾನ್ ಗಡಿ ತಲುಪಿದ ಚೀನಾ ಯುದ್ಧ ನೌಕೆಗಳು: ಆತಂಕದಲ್ಲಿ ದ್ವೀಪರಾಷ್ಟ್ರ