ಕರ್ನಾಟಕ

karnataka

ETV Bharat / bharat

ಭ್ರಷ್ಟಾಚಾರ ಪ್ರಕರಣ: ಚಂದ್ರಬಾಬು ನಾಯ್ಡು ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್ - former CM Chandrababu Naidu

ತೆಲುಗು ದೇಶಂ ಪಕ್ಷದ ಅಧ್ಯಕ್ಷ ಮತ್ತು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರಿಗೆ ಮತ್ತೊಂದು ಹಿನ್ನಡೆಯಾಗಿದೆ. ವಿವಿಧ ಪ್ರಕರಣಗಳಲ್ಲಿ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ಆಂಧ್ರಪ್ರದೇಶ ಹೈಕೋರ್ಟ್ ವಜಾಗೊಳಿಸಿದೆ.

ಚಂದ್ರಬಾಬು ನಾಯ್ಡು ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಚಂದ್ರಬಾಬು ನಾಯ್ಡು ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್

By PTI

Published : Oct 9, 2023, 12:17 PM IST

Updated : Oct 9, 2023, 1:19 PM IST

ಅಮರಾವತಿ (ಆಂಧ್ರಪ್ರದೇಶ): ಭ್ರಷ್ಟಾಚಾರ ಪ್ರಕರಣಗಳಲ್ಲಿ ಬಂಧನಕ್ಕೊಳಗಾಗಿರುವ ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಆಂಧ್ರಪ್ರದೇಶ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.

"ಇನ್ನರ್ ರಿಂಗ್ ರೋಡ್, ಫೈಬರ್ ನೆಟ್ ಮತ್ತು ಅಂಗಲ್ಲು ಗಲಭೆ ಪ್ರಕರಣಗಳಲ್ಲಿ ಚಂದ್ರಬಾಬು ನಾಯ್ಡು ಅವರ ಜಾಮೀನು ಅರ್ಜಿಯನ್ನು ಆಂಧ್ರಪ್ರದೇಶ ಹೈಕೋರ್ಟ್ ವಜಾಗೊಳಿಸಿದೆ" ಎಂದು ವಕೀಲ ಕೃಷ್ಣ ಮೂರ್ತಿ ಹೇಳಿದ್ದಾರೆ.

ಮೇಲಿನ ಮೂರು ಪ್ರಕರಣದಲ್ಲಿ ತಮಗೆ ನಿರೀಕ್ಷಣಾ ಜಾಮೀನು ನೀಡುವಂತೆ ಕೋರಿ ಚಂದ್ರಬಾಬು ನಾಯ್ಡು ಅರ್ಜಿ ಸಲ್ಲಿಸಿದ್ದರು. ನಾಯ್ಡು ಸಲ್ಲಿಸಿದ್ದ ಅರ್ಜಿಗಳನ್ನು ಹೈಕೋರ್ಟ್ ಏಕಸದಸ್ಯ ಪೀಠ ವಜಾಗೊಳಿಸಿದೆ. ಈ ಅರ್ಜಿಗಳ ವಾದ - ಪ್ರತಿವಾದಗಳು ಕಳೆದ ವಾರ ಪೂರ್ಣಗೊಂಡಿದ್ದು, ತೀರ್ಪನ್ನು ಸೋಮವಾರಕ್ಕೆ ಕಾಯ್ದಿರಿಸಲಾಗಿತ್ತು.

ಚಂದ್ರಬಾಬು ಪರವಾಗಿ ಸುಪ್ರೀಂ ಕೋರ್ಟ್‌ನ ವಕೀಲ ಸಿದ್ಧಾರ್ಥ ಲೂತ್ರಾ ಹಾಗೂ ಸಿಐಡಿ ಪರವಾಗಿ ಎಜಿ ಶ್ರೀರಾಮ್ ವಾದ ಮಂಡಿಸಿದ್ದರು. ಎರಡೂ ಕಡೆಯ ವಾದವನ್ನು ಆಲಿಸಿದ ನ್ಯಾಯಾಲಯ ಚಂದ್ರಬಾಬು ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.

ಟಿಡಿಪಿ ಆಡಳಿತದ ಅವಧಿಯಲ್ಲಿನ ರಾಜಧಾನಿ ಅಮರಾವತಿಯ ಇನ್ನರ್ ರಿಂಗ್ ರೋಡ್ ಮಹಾ ಯೋಜನೆ ರೂಪಿಸುವಲ್ಲಿ ಅವ್ಯವಹಾರ ನಡೆದಿದೆ ಎಂದು ವೈಎಸ್‌ಆರ್‌ಸಿಪಿ ಶಾಸಕ ಅಲ್ಲಾ ರಾಮಕೃಷ್ಣ ರೆಡ್ಡಿ ಸಲ್ಲಿಸಿದ್ದ ದೂರಿನ ಆಧಾರದ ಮೇಲೆ ಸಿಐಡಿ ಕಳೆದ ವರ್ಷ ಮೇ 9ರಂದು ಮಾಜಿ ಸಿಎಂ ಚಂದ್ರಬಾಬು ಮತ್ತಿತರರ ವಿರುದ್ಧ ಪ್ರಕರಣ ದಾಖಲಿಸಿತ್ತು. ಚಂದ್ರಬಾಬು ಅವರನ್ನು ಸಿಐಡಿ ಪ್ರಕರಣದಲ್ಲಿ A1 ಆರೋಪಿ ಎಂದು ಹೆಸರಿಸಿದೆ.

ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಟಿಡಿಪಿ ಮುಖ್ಯಸ್ಥರನ್ನು ಅಪರಾಧ ತನಿಖಾ ಇಲಾಖೆ (ಸಿಐಡಿ) ಕಳೆದ ತಿಂಗಳು ಬಂಧಿಸಿದ್ದು, ಬಂಧನ ಖಂಡಿಸಿ ಹಲವು ಟಿಡಿಪಿ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಸುಳ್ಳು ಆರೋಪಗಳನ್ನು ಹೊರಿಸುವ ಮೂಲಕ ಅವರನ್ನು ಬಂಧಿಸಲಾಗಿದೆ ಎಂದು ಕಿಡಿ ಕಾರುತಿದ್ದಾರೆ. ಆರೋಪ ಮತ್ತು ಪ್ರತ್ಯಾರೋಪದಿಂದ ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಕೋಲಾಹಲ ಸೃಷ್ಟಿಯಾಗಿದೆ.

ಶನಿವಾರ ಚಂದ್ರಬಾಬು ನಾಯ್ಡು ಅವರ ಪತ್ನಿ ನಾರಾ ಭುವನೇಶ್ವರಿ ಮತ್ತು ತೆಲುಗು ದೇಶಂ ಪಕ್ಷದ ಹಲವು ಮುಖಂಡರು ಟಿಡಿಪಿ ವರಿಷ್ಠರ ಬಂಧನ ಖಂಡಿಸಿ ಪಕ್ಷದ ತಾತ್ಕಾಲಿಕ ಕ್ಯಾಂಪ್ ಕಚೇರಿಯಲ್ಲಿ ದೀಪಗಳನ್ನು ಆಫ್ ಮಾಡಿ ಮಣ್ಣಿನ ದೀಪಗಳನ್ನು ಬೆಳಗಿಸಿ ಪ್ರತಿಭಟನೆ ನಡೆಸಿದರು.

ಇದನ್ನು ಓದಿ:ಎನ್​ಡಿಎ ಮೈತ್ರಿಕೂಟದಿಂದ ಜನಸೇನಾ ಹೊರಬರುವ ಬಗ್ಗೆ ವೈಎಸ್​ಆರ್​ ಕಾಂಗ್ರೆಸ್​ನಿಂದ ಅಪಪ್ರಚಾರ: ಪವನ್​ ಕಲ್ಯಾಣ್

Last Updated : Oct 9, 2023, 1:19 PM IST

ABOUT THE AUTHOR

...view details