ನಂದ್ಯಾಲ (ಆಂಧ್ರ ಪ್ರದೇಶ): ಆಂಧ್ರ ಪ್ರದೇಶದ ನಂದ್ಯಾಲ ಜಿಲ್ಲೆಯಲ್ಲಿ ಒಟ್ಟಿಗೆ ಪತ್ತೆಯಾದ ನಾಲ್ಕು ಹುಲಿ ಮರಿಗಳನ್ನು ಅವುಗಳ ತಾಯಿ ಹುಲಿಯೊಂದಿಗೆ ಸೇರಲು ಅರಣ್ಯಾಧಿಕಾರಿಗಳ ಪ್ರಯತ್ನ ಮುಂದುವರೆದಿದೆ. ತಾಯಿ ಹುಲಿ ಜಾಡು ಪತ್ತೆ ಹಚ್ಚಲು ಕಳೆದ ನಾಲ್ಕು ದಿನಗಳಿಂದ ಶ್ರಮಿಸುತ್ತಿದ್ದರೂ, ಅದು ಸಾಧ್ಯವಾಗುತ್ತಿಲ್ಲ. ಆದ್ದರಿಂದ ನಾಲ್ಕು ಮರಿಗಳನ್ನೂ ಕೂಡ ತಿರುಪತಿ ಮೃಗಾಲಯಕ್ಕೆ ಸ್ಥಳಾಂತರಿಸಲಾಗಿದೆ.
ಇಲ್ಲಿನ ಕೋತಪಲ್ಲಿ ಮಂಡಲದ ಪೆದ್ದ ಗುಮ್ಮದಪುರಂ ಗ್ರಾಮದ ಬಳಿ ಮಾರ್ಚ್ 6ರಂದು ನಾಲ್ಕು ಹುಲಿ ಮರಿಗಳು ಪತ್ತೆಯಾಗಿದ್ದವು. ಈ ಮರಿಗಳನ್ನು ಗಮನಿಸಿದ್ದ ಗ್ರಾಮಸ್ಥರು ಅವುಗಳನ್ನು ರಕ್ಷಣೆ ಮಾಡಿದ್ದರು. ನಂತರ ಅರಣ್ಯ ಇಲಾಖೆಯ ವಿಷಯ ಮುಟ್ಟಿಸಿದ್ದರು. ಆದರೆ, ತಾಯಿ ಹುಲಿ ಕಾಣಿಸಿಕೊಂಡಿರಲಿಲ್ಲ. ಹೀಗಾಗಿಯೇ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ತಾಯಿ ಹುಲಿಯ ಪತ್ತೆಗಾಗಿ ಶೋಧ ಕಾರ್ಯ ಆರಂಭಿಸಿದ್ದರು.
ಫಲಕೊಡದ ಶತತ ಶ್ರಮ: ತಾಯಿ ಹುಲಿಯೊಂದಿಗೆ ಅನಾಥ ಮರಿಗಳನ್ನು ಸೇರಿಸಬೇಕೆಂದು ಸಾಕಷ್ಟು ಶ್ರಮಿಸಲಾಗುತ್ತಿದೆ. ಇದಕ್ಕಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ 300ಕ್ಕೂ ಹೆಚ್ಚು ಜನರು ಹುಲಿ ಮರಿಗಳನ್ನು ಅದರ ತಾಯಿಗೆ ಹಿಂದಿರುಗಿಸುವ ಕಾರ್ಯಾಚರಣೆಯಲ್ಲಿ ಕೆಲಸ ತೊಡಗಿಸಿಕೊಂಡಿದ್ದರು. ಆದರೆ, ಅಷ್ಟೇ ಪ್ರಯತ್ನಗಳು ಮಾಡಿದರೂ ತಾಯಿ ಹುಲಿ ಪತ್ತೆ ಆಗುತ್ತಿಲ್ಲ. ಇಷ್ಟೇ ಅಲ್ಲ, ಈ ತಾಯಿ ಹುಲಿಯ ಕುರುಹುಗಳನ್ನು ಪತ್ತೆಹಚ್ಚಲು ಕ್ರಮವಾಗಿ ಆತ್ಮಕೂರು ಮತ್ತು ಕೊತ್ತಪಲ್ಲಿ ಮಂಡಲಗಳ ವ್ಯಾಪ್ತಿಯ ನಲ್ಲಮಲ ಅರಣ್ಯ ಪ್ರದೇಶದಲ್ಲಿ ಸುಮಾರು 40 ಸಿಸಿಟಿವಿ ಕ್ಯಾಮರಾಗಳನ್ನೂ ಅಳವಡಿಸಲಾಗಿದೆ.
ಮತ್ತೊಂದೆಡೆ, ಮುಸಲಿಮಡುಗು ಗ್ರಾಮದ ಬಳಿ ತಾಯಿ ಹುಲಿ ಇರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ದೊರೆತಿತ್ತು. ಈ ಮಾಹಿತಿ ಪಡೆದ ಅಧಿಕಾರಿಗಳು ಇಲ್ಲಿ ಕೂಡ ಹುಲಿಯ ಹೆಜ್ಜೆ ಗುರುತು ಪತ್ತೆ ಹಚ್ಚಲು ಮುಂದಾಗಿದ್ದರು. ಆದರೆ, ಈ ಎಲ್ಲ ಪ್ರಯತ್ನಗಳು ಫಲಕಾರಿಯಾಗದ ಕಾರಣ ಹುಲಿ ಮರಿಗಳನ್ನು ತಿರುಪತಿ ಮೃಗಾಲಯಕ್ಕೆ ಸ್ಥಳಾಂತರಿಸುವ ನಿರ್ಧಾರಕ್ಕೆ ಉನ್ನತ ಅಧಿಕಾರಿಗಳು ಬಂದಿದ್ದಾರೆ.