ಗುಂಟೂರು (ಆಂಧ್ರಪ್ರದೇಶ): ಆಂಧ್ರಪ್ರದೇಶದ ಗುಂಟೂರಿನ ಮಹಿಳಾ ವೈದ್ಯೆಯೊಬ್ಬರು ತಮ್ಮ 20 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಗುಂಟೂರು ಸರ್ಕಾರಿ ಜನರಲ್ ಆಸ್ಪತ್ರೆಗೆ (ಜಿಜಿಹೆಚ್) ಮಾತಾ ಶಿಶು ಕಲ್ಯಾಣ ಭವನ (Mata Shishu Welfare Building) ನಿರ್ಮಾಣಕ್ಕಾಗಿ ದೇಣಿಗೆಯಾಗಿ ನೀಡಿದ್ದಾರೆ. ಇವರಿಂದ ಪ್ರೇರಿತರಾಗಿ ಇನ್ನೂ ಕೆಲವು ದಾನಿಗಳು ಮುಂದೆ ಬಂದು ದೇಣಿಗೆ ನೀಡಿದ್ದಾರೆ.
ಡಾ.ಉಮಾ ಗವಿನಿ ಎಂಬುವವರೇ ಹೊಸ ಆಸ್ಪತ್ರೆಗಾಗಿ 20 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ದೇಣಿಗೆಯಾಗಿ ನೀಡಿದವರು. ಅಮೆರಿಕದಲ್ಲಿ ಇಮ್ಯುನೊಲೊಜಿಸ್ಟ್ ಮತ್ತು ಅಲರ್ಜಿ ಸ್ಪೆಷಲಿಸ್ಟ್ ಆಗಿ ಡಾ.ಉಮಾ ಗವಿನಿ ಕೆಲಸ ಮಾಡುತ್ತಿದ್ದಾರೆ. 1965ರಲ್ಲಿ ಗುಂಟೂರು ಮೆಡಿಕಲ್ ಕಾಲೇಜಿನಲ್ಲಿ ಮೆಡಿಸಿನ್ ಮಾಡಿದ್ದ ಅವರು, ಉನ್ನತ ಶಿಕ್ಷಣ ಮುಗಿಸಿ ಅಮೆರಿಕಕ್ಕೆ ಹೋಗಿ ನೆಲೆಸಿದ್ದಾರೆ. ಡಾ.ಉಮಾ ಅವರ ಪತಿ ಡಾ.ಕಾನೂರಿ ರಾಮಚಂದ್ರರಾವ್ ಸಹ ವೈದ್ಯರಾಗಿದ್ದು, ಎರಡು ವರ್ಷಗಳ ಹಿಂದೆ ನಿಧನರಾಗಿದ್ದಾರೆ.
ಕಳೆದ ತಿಂಗಳು ಡಲ್ಲಾಸ್‌ನಲ್ಲಿ ನಡೆದ ಗುಂಟೂರು ಮೆಡಿಕಲ್ ಕಾಲೇಜು ಹಳೆ ವಿದ್ಯಾರ್ಥಿಗಳ ಸಂಘದ ಸಭೆಯಲ್ಲಿ ಡಾ.ಉಮಾ ಅವರು ಜಿಜಿಹೆಚ್‌ಗೆ ಬೃಹತ್ ದೇಣಿಗೆ ನೀಡುವ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಕೈಯಲ್ಲಿ ಒಂದು ಡಾಲರ್ ಕೂಡ ಇಟ್ಟುಕೊಳ್ಳದೆ ತನ್ನ ಮತ್ತು ತನ್ನ ಗಂಡನ ಪರವಾಗಿ ತನ್ನೆಲ್ಲ ಸಂಪತ್ತನ್ನು ದಾನ ಮಾಡುವುದಾಗಿ ಘೋಷಿಸಿದ್ದಾರೆ.