ಆಂಧ್ರಪ್ರದೇಶ: ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಸಾಮರ್ಲಕೋಟದ ಬಲುಸುಲಪೇಟೆಯ ದಲಿತ ಯುವಕನೋರ್ವ ಬುಧವಾರ ತನ್ನ ಮನೆಯಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಅಲಾಪು ಗಿರೀಶ್ ಬಾಬು (24) ಆತ್ಮಹತ್ಯೆ ಮಾಡಿಕೊಂಡ ಯುವಕ. ಗಿರೀಶ್ ಸಾವಿಗೆ ರಾಜಕೀಯ ಒತ್ತಡ ಹಾಗೂ ಪೊಲೀಸರ ದೌರ್ಜನ್ಯವೇ ಕಾರಣ ಎಂದು ಮೃತನ ಸಹೋದರ ಪ್ರವೀಣ್ ಕುಮಾರ್ ಆರೋಪಿಸಿದ್ದಾರೆ.
'ನಾನು ವೈಎಸ್‌ಆರ್‌ಸಿಪಿ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ. ಹೀಗಾಗಿ ವೈಎಸ್‌ಆರ್‌ಸಿಪಿ ಮುಖಂಡರು ಸೇಡು ತೀರಿಸಿಕೊಳ್ಳಲು ನನ್ನ ಸಹೋದರನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ಪೊಲೀಸರಿಂದ ಥಳಿಸಿ, ತೀವ್ರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಮಹಿಳಾ ಸ್ವಯಂಸೇವಕಿ ಮತ್ತು ಆಕೆಯ ಪತಿ, ನನ್ನ ತಮ್ಮನ ವಿರುದ್ಧ ಕಳ್ಳತನ ಮತ್ತು ಅತ್ಯಾಚಾರ ಯತ್ನದ ಸುಳ್ಳು ದೂರು ದಾಖಲಿಸಿದ್ದಾರೆ' ಎಂದು ಪ್ರವೀಣ್ ಆರೋಪಿಸಿದ್ದಾರೆ.
ಆಡಳಿತ ಪಕ್ಷದ ಕೌನ್ಸಿಲರ್ ಹಾಗೂ ಇತರ ಮುಖಂಡರ ಒತ್ತಡಕ್ಕೆ ಮಣಿದು ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಸಬ್ ಇನ್ಸ್ಪೆಕ್ಟರ್ ನನ್ನ ಸಹೋದರನನ್ನು ನಿತ್ಯ ಠಾಣೆಗೆ ಕರೆಯಿಸಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸಿಸುತ್ತಿದ್ದರು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಮಾರ್ ಹೇಳಿದ್ದಾರೆ.
ಓದಿ:ಪ್ರಿಯಕರನನ್ನು ಭೇಟಿಯಾಗಲು ವಾಘಾ ಗಡಿ ದಾಟುತ್ತಿದ್ದ ವಿವಾಹಿತ ಮಹಿಳೆ ಬಂಧನ
ಈ ನಡುವೆ ಗುರುವಾರ ಬೆಳಗ್ಗೆ 10.30 ಕ್ಕೆ ಸಾಮರ್ಲಕೋಟ ಪೊಲೀಸ್ ಠಾಣೆ ಮುಂಭಾಗ ಗಿರೀಶ್ ಶವ ಇಟ್ಟು ಕುಟುಂಬಸ್ಥರು ಪ್ರತಿಭಟನೆ ನಡೆಸಿದರು. ಇದರಿಂದಾಗಿ ಕೆಲ ಕಾಲ ಪೊಲೀಸರು ಹಾಗೂ ಮೃತನ ಕುಟುಂಬಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಡಿಎಸ್ಪಿ ಎ.ಶ್ರೀನಿವಾಸರಾವ್, ಘಟನೆ ಕುರಿತು ಸಮಗ್ರ ತನಿಖೆ ನಡೆಸುವುದಾಗಿ ಕುಟುಂಬಸ್ಥರ ಮನವೊಲಿಸಿ, ಮೃತದೇಹವನ್ನು ಆ್ಯಂಬುಲೆನ್ಸ್ ಮೂಲಕ ಕಾಕಿನಾಡ ಜಿಜಿಎಚ್ ಗೆ ರವಾನಿಸಿದರು.