ಕರ್ನೂಲ್ (ಆಂಧ್ರಪ್ರದೇಶ):ಮಗುವೊಂದು ಅಪರೂಪದ ಕಾಯಿಲೆಗೆ ತುತ್ತಾಗಿದೆ. ಚಿಕಿತ್ಸೆಗೆ 16 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇಷ್ಟೊಂದು ಹಣ ನಾವು ಎಲ್ಲಿಂದ ತರಬೇಕೆಂದು ಎಂದು ಕುಟುಂಬ ಅಳಲು ತೋಡಿಕೊಂಡಿದೆ. ಮಗುವಿನ ಪೋಷಕರು ಸಹಾಯಕ್ಕಾಗಿ ಬೇಡಿಕೊಳ್ಳುತ್ತಿದ್ದಾರೆ.
ಕರ್ನೂಲ್ ನಗರದ ಎನ್.ಆರ್.ಪೇಟೆಯ ವೆಂಕಟೇಶ್ ಗೌಡ ಮತ್ತು ಉಷಾರಾಣಿ ದಂಪತಿಗೆ ಮದುವೆಯಾದ ಏಳು ವರ್ಷಗಳ ನಂತರ ಮಗ ನಿವಂಶ್ ಜನಿಸಿದ್ದಾನೆ. ಹಲವು ವರ್ಷಗಳ ನಂತರ ಮಗು ಜನಿಸಿದ್ದಕ್ಕೆ ದಂಪತಿ ತುಂಬಾ ಸಂತೋಷದಲ್ಲಿದ್ದರು. ಕೆಲವೇ ದಿನಗಳಲ್ಲಿ ಅವರ ಸಂತೋಷ ಕಳೆದು ಹೋಗಿದೆ. ತಿಂಗಳು ಕಳೆದಂತೆ ಮಗುವಿಗೆ ಚಲಿಸಲು ಸಾಧ್ಯವಾಗುತ್ತಿಲ್ಲ. ಮಗುವಿನ ಕುತ್ತಿಗೆಯಲ್ಲೂ ಯಾವುದೇ ಚಲನವಲನ ಕಾಣುತ್ತಿಲ್ಲ. ನಾಲ್ಕು ತಿಂಗಳ ಮಗು ಅನಾರೋಗ್ಯಕ್ಕೆ ಒಳಗಾದಾಗ ಆತಂಕಗೊಂಡ ಪೋಷಕರು ನಗರದ ಮಕ್ಕಳ ವೈದ್ಯರಿಗೆ ತೋರಿಸಿದ್ದಾರೆ. ಆದರೂ ಪ್ರಯೋಜನವಾಗದ ಕಾರಣ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದರು.
ಬೆಂಗಳೂರಿನಲ್ಲಿ ಮಗುವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ವೈದ್ಯರು ಇದು ಆನುವಂಶಿಕ ಸಮಸ್ಯೆಯಿಂದ ಬಂದ ಕಾಯಿಲೆ ಎಂದು ದೃಢಪಡಿಸಿದರು. ಎರಡು ವರ್ಷ ತುಂಬುವ ಮುನ್ನ ಮಗುವಿಗೆ ಲಸಿಕೆ ಹಾಕಿಸಲು ಮತ್ತು ವೈದ್ಯಕೀಯ ಸೇವೆ ನೀಡಲು 16 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಹೇಳಿದರು. ಈ ಮಾಹಿತಿ ತಿಳಿದ ಮಗುವಿನ ಪೋಷಕರಿಗೆ ದಿಕ್ಕೇ ತೋಚದಂತಾಗಿದೆ.
ಮಗುವಿನ ಪೋಷಕರು ಇಷ್ಟು ದೊಡ್ಡ ಮೊತ್ತವನ್ನು ಹೇಗೆ ಸಂಗ್ರಹಿಸಬೇಕೆಂದು ತಿಳಿಯದೆ ಪರದಾಡುತ್ತಿದ್ದಾರೆ. ಅನಾರೋಗ್ಯದಿಂದ ಮಗುವಿನ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಿರುವ ಕಾರಣ ಒಂದೆಡೆ ಆತಂಕದಲ್ಲಿದ್ದಾರೆ. ದಾನಿಗಳ ಸಹಾಯಕ್ಕಾಗಿ ದಂಪತಿ ಕಾಯುತ್ತಿದ್ದಾರೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಅರ್ಜಿ ಸಲ್ಲಿಸಿದ್ದಾರೆ. ಸರಕಾರ ಮತ್ತು ದಾನಿಗಳು ಸಹಾಯ ಮಾಡದ ಹೊರತು ಮಗುವಿಗೆ ವೈದ್ಯಕೀಯ ಸೇವೆ ನೀಡಲು ಸಾಧ್ಯವಿಲ್ಲ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ.