ಅಮರಾವತಿ: ಸಾರಿಗೆ ಸಚಿವ ಪೆರ್ನಿ ವೆಂಕಟರಾಮಯ್ಯ ಅವರ ಮೇಲೆ ಭಾನುವಾರ ಬೆಳಗ್ಗೆ ವ್ಯಕ್ತಿಯೊಬ್ಬ ಟ್ರೋವಲ್ ನಿಂದ ಹಲ್ಲೆ ಮಾಡಲು ಯತ್ನಿಸಿದನು. ಈ ವೇಳೆ, ಸಚಿವರ ಅನುಯಾಯಿಗಳು ಮತ್ತು ಭದ್ರತಾ ಸಿಬ್ಬಂದಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ.
ಕೃಷ್ಣ ಜಿಲ್ಲೆಯ ಮಚಿಲಿಪಟ್ನಂ ನಿವಾಸದ ಬಳಿ ವೈಕ್ತಿಯೊಬ್ಬ ಪೆರ್ನಿ ವೆಂಕಟರಾಮಯ್ಯ ಅಲಿಯಾಸ್ ನಾನಿ ಅವರ ಮೇಲೆ ಟ್ರೋವಲ್‌ನಿಂದ ಹಲ್ಲೆ ಮಾಡಲು ಯತ್ನಿಸಿದ್ದ. ಬಂಧಿತನನ್ನು ಬಿ.ನಾಗೇಶ್ವರ ರಾವ್ ಎಂದು ಗುರುತಿಸಲಾಗಿದೆ. ಕುಡಿದ ಮತ್ತಿನಲ್ಲಿ ಸಚಿವರ ಮೇಲೆ ಹಲ್ಲೆಗೆ ಯತ್ನಿಸಿರುವುದಾಗಿ ತಿಳಿದು ಬಂದಿದೆ.
ದೀರ್ಘಕಾಲದ ಅನಾರೋಗ್ಯದಿಂದಾಗಿ ಇತ್ತೀಚೆಗೆ ನಿಧನರಾದ ಪೆರ್ನಿ ವೆಂಕಟರಾಮಯ್ಯ ಅವರ ತಾಯಿ ನಾಗೇಶ್ವರಮ್ಮ ಅವರ 12 ನೇ ದಿನದ ಸಮಾರಂಭದ ವೇಳೆ, ಈ ಘಟನೆ ಸಂಭವಿಸಿದೆ.
ಸಮಾರಂಭದಲ್ಲಿ ಭಾಗಿಯಾಗಿದ್ದ ನನ್ನ ಸಂಬಂಧಿಕರು ಮತ್ತು ಸ್ಥಳೀಯರೊಂದಿಗೆ ಮಾತನಾಡುತ್ತಿದ್ದೆ. ಆಗ ಓರ್ವ ವ್ಯಕ್ತಿ ನನ್ನ ಪಾದಗಳನ್ನು ಮುಟ್ಟಲು ಪ್ರಯತ್ನಿಸಿದ. ಇದ್ದಕ್ಕಿದ್ದಂತೆ, ತೀಕ್ಷ್ಣವಾದ ಕಬ್ಬಿಣದ ಉಪಕರಣವನ್ನು ತೆಗೆದು ನನ್ನ ಮೇಲೆ ಹೊಡೆದ. ಭದ್ರತಾ ಸಿಬ್ಬಂದಿ ನನ್ನ ರಕ್ಷಣೆಗೆ ಬಂದರು. ಘಟನೆಯಲ್ಲಿ ನನಗೆ ಯಾವುದೇ ಗಾಯಗಳಾಗಿಲ್ಲ. ನಾನು ಸುರಕ್ಷಿತವಾಗಿದ್ದೇನೆ ಎಂದು ಸಚಿವ ಪೆರ್ನಿ ವೆಂಕಟರಾಮಯ್ಯ ತಿಳಿಸಿದ್ದಾರೆ.
ಚಿಲಕಲಪುಡಿ ಪೊಲೀಸರು ಬಿ.ನಾಗೇಶ್ವರ ರಾವ್ನನ್ನು ವಶಕ್ಕೆ ಪಡೆದಿದ್ದು, ದಾಳಿಯ ಕಾರಣವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ.