ಅಮರಾವತಿ (ಆಂಧ್ರ ಪ್ರದೇಶ):ಆಂಧ್ರ ಪ್ರದೇಶದ ಸಿಬಿಐ ಅಧಿಕಾರ ವ್ಯಾಪ್ತಿಯ ಬಗ್ಗೆ ಆಂಧ್ರ ಪ್ರದೇಶ ಹೈಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಮಾರ್ಗದರ್ಶಿ ಚಿಟ್ ಫಂಡ್ ಪ್ರೈವೇಟ್ ಲಿಮಿಟೆಡ್ ಅಧ್ಯಕ್ಷರಾದ ರಾಮೋಜಿ ರಾವ್ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಶೈಲಜಾ ಕಿರಣ್ ವಿರುದ್ಧ ಸಿಐಡಿ ದಾಖಲಿಸಿದ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯವು 8 ವಾರಗಳ ಕಾಲವಧಿಗೆ ತಡೆ ನೀಡಿದೆ.
ಜಿ.ಯೂರಿ ರೆಡ್ಡಿ ಎಂಬವರು ಪೋರ್ಜರಿ ಮೂಲಕ ಷೇರುಗಳ ವರ್ಗಾವಣೆ ಕುರಿತು ಮಾಡಿರುವ ಆರೋಪಗಳ ಬಗ್ಗೆ ನೀಡಿದ ದೂರಿನ ಆಧಾರದಡಿ ಮಾರ್ಗದರ್ಶಿ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಆಂಧ್ರದ ಸಿಐಡಿ ಪ್ರಕರಣ ದಾಖಲಿಸಿದೆ. ಈ ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ಸಿಐಡಿ ಹಾಗೂ ದೂರುದಾರ ಜಿ.ಯೂರಿ ರೆಡ್ಡಿಗೆ ಹೈಕೋರ್ಟ್ ಬುಧವಾರ ನೋಟಿಸ್ ಜಾರಿ ಮಾಡಿದೆ. ಡಿ.6ರಂದು ನಡೆಯಲಿರುವ ಮುಂದಿನ ವಿಚಾರಣೆಯಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದೆ.
ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಹೈಕೋರ್ಟ್, ಸಿಐಡಿ ಕಾರ್ಯವೈಖರಿಯ ಬಗ್ಗೆ ಹಲವಾರು ಪ್ರಶ್ನೆಗಳನ್ನು ಕೇಳಿತು. ಅಷ್ಟೇ ಅಲ್ಲ, ಅದರ ಅಧಿಕಾರ ವ್ಯಾಪ್ತಿಯ ಬಗ್ಗೆ ತೀವ್ರ ಆಕ್ಷೇಪಣೆಯನ್ನೂ ಎತ್ತಿತು. ಈ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ ಎಂದು ದೂರುದಾರರು ಹೇಳಿದ ಮೇಲೂ ಪ್ರಕರಣ ದಾಖಲಿಸಿದ ಸಂಬಂಧ ಆಂಧ್ರದ ಸಿಐಡಿಗೆ ತನ್ನ ಅಧಿಕಾರ ವ್ಯಾಪ್ತಿ ಕುರಿತು ನ್ಯಾಯಾಲಯ ಪ್ರಶ್ನಿಸಿತು.
ಇದನ್ನೂ ಓದಿ:'ಹೈದರಾಬಾದ್‌ನಲ್ಲಿ ನೆಲೆಸಿರುವ ವ್ಯಕ್ತಿ ಆಂಧ್ರದಲ್ಲಿ ದೂರು ನೀಡಿದ್ದೇಕೆ?': ಮಾರ್ಗದರ್ಶಿ ಚಿಟ್‌ಫಂಡ್ ಷೇರು ಕುರಿತ ಸುಳ್ಳು ಆರೋಪಗಳನ್ನು ಸ್ಪಷ್ಟವಾಗಿ ಅಲ್ಲಗಳೆದ ರಾಮೋಜಿ ಗ್ರೂಪ್
''ಹೈದರಾಬಾದ್‌ನಲ್ಲಿ ಖರೀದಿಸಿದ ಚಿನ್ನಾಭರಣ ಅಲ್ಲಿಯೇ ಕಳ್ಳತನವಾದರೆ, ವಿಜಯವಾಡದಲ್ಲಿ ದುಡಿದ ಹಣದಲ್ಲಿ ಚಿನ್ನಾಭರಣ ಖರೀದಿಸಲಾಗಿದೆ ಎಂಬ ಕಾರಣಕ್ಕೆ ವಿಜಯವಾಡದಲ್ಲಿ ಪ್ರಕರಣ ದಾಖಲಿಸುವುದು ಹೇಗೆ ಸಿಂಧುತ್ವವಾಗುತ್ತದೆ?'' ಎಂದು ಆಂಧ್ರದ ಸಿಐಡಿಯನ್ನು ಉಲ್ಲೇಖಿಸಿ ಹೈಕೋರ್ಟ್ ಕೇಳಿತು. ಇಂತಹ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡ ನ್ಯಾಯಮೂರ್ತಿ ಬಿ.ವಿ.ಎಲ್.ಎನ್.ಚಕ್ರವರ್ತಿ, ಸಿಐಡಿ ದಾಖಲಿಸಿರುವ ಪ್ರಕರಣದ ಮುಂದಿನ ಎಲ್ಲ ಪ್ರಕ್ರಿಯೆಗಳನ್ನು ಎಂಟು ವಾರಗಳ ಕಾಲ ಅಮಾನತುಗೊಳಿಸಿ ಮಧ್ಯಂತರ ಆದೇಶ ನೀಡಿದರು.
ಅಕ್ಟೋಬರ್ 13ರಂದು ಯೂರಿ ರೆಡ್ಡಿ ನೀಡಿದ ದೂರಿನ ಆಧಾರದ ಮೇಲೆ ಮಾರ್ಗದರ್ಶಿ ಚಿಟ್ ಫಂಡ್ ಅಧ್ಯಕ್ಷರಾದ ರಾಮೋಜಿ ರಾವ್ ಮತ್ತು ಎಂಡಿ ಶೈಲಜಾ ಕಿರಣ್ ವಿರುದ್ಧ ಮಂಗಳಗಿರಿ ಸಿಐಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ತಮ್ಮ ತಂದೆ ಜಿ. ಜಗನ್ನಾಥ ರೆಡ್ಡಿ (ಜಿ.ಜೆ.ರೆಡ್ಡಿ) ಅವರಿಂದ ನೋಂದಾಯಿಸಲಾದ 288 ಷೇರುಗಳನ್ನು ನಕಲಿ ಸಹಿ ಮೂಲಕ ಮಾರ್ಗದರ್ಶಿ ಎಂಡಿ ಅವರಿಗೆ ವರ್ಗಾಯಿಸಿದ್ದಾರೆ ಎಂದು ಯೂರಿ ರೆಡ್ಡಿ ಆರೋಪಿಸಿದ್ದಾರೆ. ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ವಜಾಗೊಳಿಸುವಂತೆ ಇಬ್ಬರೂ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಹಿರಿಯ ವಕೀಲರಾದ ಸಿದ್ಧಾರ್ಥ ಲೂತ್ರಾ, ನಾಗಮುತ್ತು, ಪೋಸಾನಿ ವೆಂಕಟೇಶ್ವರಲು ಅರ್ಜಿದಾರರ ಪರ ವಾದ ಮಂಡಿಸಿದರು.
ಯೂರಿ ರೆಡ್ಡಿ ಅವರ ಷೇರುಗಳನ್ನು ಖರೀದಿಸಿದ್ದಕ್ಕಾಗಿ ಮಾರ್ಗದರ್ಶಿ ಕಂಪನಿಯು ಅವರಿಗೆ ಚೆಕ್ ರೂಪದಲ್ಲಿ ಹಣ ಪಾವತಿಸಿದೆ. ದೂರುದಾರರು ಆ ಷೇರುಗಳನ್ನು ಮಾರ್ಗದರ್ಶಿ ಕಂಪನಿಗೆ ವರ್ಗಾಯಿಸಲು ಸಹಿ ಹಾಕಿದ್ದಾರೆ. ಯೂರಿ ರೆಡ್ಡಿ ಅವರು ಚೆಕ್ ಅನ್ನು ನಗದೀಕರಿಸದ ಮತ್ತು ಆಕಸ್ಮಿಕವಾಗಿ ಖಾಲಿ ಫಾರ್ಮ್ಗೆ ಕಂಪನಿಗಳ ರಿಜಿಸ್ಟ್ರಾರ್‌ಗೆ ಈ ಹಿಂದೆ ದೂರು ನೀಡಿದ್ದಾರೆ. ಅದು ಇನ್ನೂ ಬಾಕಿ ಇದೆ. ಇದೀಗ ಆರು ವರ್ಷಗಳ ನಂತರ ಅವರು ಇದ್ದಕ್ಕಿದ್ದಂತೆ ಬೆದರಿಕೆ ಹಾಕಿ ಸಹಿ ಮಾಡಿಸಿಕೊಳ್ಳಲಾಗಿದೆ ಎಂಬ ಹೊಸ ಆರೋಪದೊಂದಿಗೆ ಆಂಧ್ರದ ಸಿಐಡಿಗೆ ದೂರು ನೀಡಿದ್ದಾರೆ.
ಮಾರ್ಗದರ್ಶಿ ಚಿಟ್ ಫಂಡ್ ಪರ ವಾದ ಮಂಡಿಸಿದ ವಕೀಲರು, ''ದೂರುದಾರರ ಆರೋಪದ ಪ್ರಕಾರವೇ ಹೈದರಾಬಾದ್‌ನಲ್ಲಿ ಈ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲು ಸಿಐಡಿಗೆ ಅಧಿಕಾರವಿಲ್ಲ. ಸಿಐಡಿ ಪ್ರಕರಣ ದಾಖಲಿಸಿಕೊಂಡರೆ, ಅದನ್ನು ತೆಲಂಗಾಣಕ್ಕೆ ವರ್ಗಾಯಿಸಬೇಕು. ಇದು ತನ್ನ ವ್ಯಾಪ್ತಿಗೆ ಬರುವುದಿಲ್ಲ. ಮಾರ್ಗದರ್ಶಿ ಎಂಡಿ ಶೈಲಜಾ ಕಿರಣ್ ಅವರಿಗೂ ಷೇರುಗಳ ವರ್ಗಾವಣೆಗೂ ಯಾವುದೇ ಸಂಬಂಧವಿಲ್ಲ'' ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದರು.
ಅಲ್ಲದೇ, ''ಇದರ ಪ್ರತಿಕ್ರಿಯೆಗಳು ನಡೆಯುವಾಗ ಅವರು ಇರಲಿಲ್ಲ. ಯೂರಿ ರೆಡ್ಡಿಯಿಂದ ಕಂಪನಿಗೆ ಷೇರುಗಳನ್ನು ವರ್ಗಾಯಿಸಿದ ನಂತರ ಕಾನೂನಿನ ನಿಬಂಧನೆಗಳನ್ನು ಅನುಸರಿಸಿ ಷೇರುಗಳನ್ನು ಶೈಲಜಾ ಕಿರಣ್ ಹೆಸರಿಗೆ ವರ್ಗಾಯಿಸಲಾಯಿತು. ಎಫ್‌ಐಆರ್‌ನಲ್ಲೂ ಅವರ ವಿರುದ್ಧ ಯಾವುದೇ ಆರೋಪಗಳಿಲ್ಲ. ದೂರು ದಾಖಲಿಸಲು ತೀವ್ರ ವಿಳಂಬ ಮಾಡಿರುವುದಕ್ಕೆ ದೂರುದಾರರು ಕಾರಣಗಳನ್ನು ತಿಳಿಸಿಲ್ಲ. ಈ ಅಂಶಗಳನ್ನು ಪರಿಗಣಿಸಿ ಸಿಐಡಿ ದಾಖಲಿಸಿರುವ ಪ್ರಕರಣದ ತನಿಖೆಗೆ ತಡೆ ನೀಡಬೇಕು'' ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಇದನ್ನೂ ಓದಿ:ಮಾರ್ಗದರ್ಶಿ ಚಿಟ್‌ಫಂಡ್ ಶಾಖೆಗಳಿಗೆ ನೀಡಿದ್ದ ಆಂಧ್ರ ಪೊಲೀಸರ ಎಲ್ಲ ನೋಟಿಸ್‌ಗಳನ್ನು ಅಮಾನತುಗೊಳಿಸಿದ ಹೈಕೋರ್ಟ್