ಅಮರಾವತಿ (ಆಂಧ್ರಪ್ರದೇಶ):ಕೊರೊನಾ ಮೃತ್ಯುಕೇಕೆಯಲ್ಲಿ ಅದೆಷ್ಟೋ ಮಕ್ಕಳು ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಪುಟ್ಟ ವಯಸ್ಸಿನಲ್ಲಿ ಹೆತ್ತವರನ್ನು ಕಳೆದುಕೊಂಡು ತಬ್ಬಲಿಗಳಾದ ಮಕ್ಕಳ ಭವಿಷ್ಯಕ್ಕೆ ಆಂಧ್ರಪ್ರದೇಶ ಸರ್ಕಾರ ಮಾನವೀಯ ನೆಲೆಗಟ್ಟಿನಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ.
ಮಧ್ಯಪ್ರದೇಶ ಮತ್ತು ದೆಹಲಿ ಸರ್ಕಾರಗಳ ಹೆಜ್ಜೆಗಳನ್ನು ಅನುಸರಿಸಿರುವ ಸಿಎಂ ವೈ.ಎಸ್.ಜಗನ್ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ, ಕೋವಿಡ್ ಸೋಂಕಿನಿಂದ ಅಪ್ಪ-ಅಮ್ಮನನ್ನು ಕಳೆದುಕೊಂಡಿರುವ ಪ್ರತಿ ಮಗುವಿನ ಹೆಸರಿನಲ್ಲಿ 10 ಲಕ್ಷ ರೂ. ಹಣವನ್ನು ಬ್ಯಾಂಕ್‌ನಲ್ಲಿ ಫಿಕ್ಸೆಡ್ ಡೆಪಾಸಿಟ್ (ಎಫ್ಡಿ) ಇಡುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಕೋವಿಡ್ ಸಾಂಕ್ರಾಮಿಕ ರೋಗದ ಎರಡನೇ ಅಲೆಯ ವಿರುದ್ಧದ ಹೋರಾಟವು ಅನೇಕ ಮಕ್ಕಳನ್ನು ಅಸುರಕ್ಷಿತ ಮತ್ತು ದುರ್ಬಲರನ್ನಾಗಿ ಮಾಡಿದೆ. ವಿಶೇಷವಾಗಿ ಮಾರಣಾಂತಿಕ ವೈರಸ್‌ನಿಂದಾಗಿ ಹೆತ್ತವರನ್ನು ಕಳೆದುಕೊಂಡ ಮಕ್ಕಳ ಭವಿಷ್ಯ ಅಪಾಯದಲ್ಲಿದೆ ಎಂದು ಅರ್ಥಮಾಡಿಕೊಂಡ ಸರ್ಕಾರ, ಪ್ರತಿ ಮಗುವಿಗೆ 10 ಲಕ್ಷ ರೂ.ಗಳ ಸ್ಥಿರ ಠೇವಣಿಯ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ನಿರ್ಧಾರ ತೆಗೆದುಕೊಂಡಿದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.