ಅಮರಾವತಿ (ಆಂಧ್ರಪ್ರದೇಶ):ಕೋವಿಡ್ ಸಾಂಕ್ರಾಮಿಕದ ನಡುವೆಯೂ 10 ಮತ್ತು 12ನೇ ತರಗತಿ ಬೋರ್ಡ್ ಪರೀಕ್ಷೆಗಳನ್ನು ನಡೆಸಲು ಹೊರಟಿದ್ದ ಆಂಧ್ರಪ್ರದೇಶ ಸರ್ಕಾರ ಇದೀಗ ಸುಪ್ರೀಂಕೋರ್ಟ್ ಎಚ್ಚರಿಕೆ ಬೆನ್ನಲ್ಲೇ ತನ್ನ ನಿರ್ಧಾರವನ್ನು ಕೈಬಿಟ್ಟಿದೆ. ಬಹುತೇಕ ಎಲ್ಲಾ ರಾಜ್ಯಗಳು ಕೊರೊನಾ ಅಪಾಯವನ್ನು ಗಮನದಲ್ಲಿಟ್ಟುಕೊಂಡು ಈ ವರ್ಷದ 10 ಮತ್ತು 12ನೇ ತರಗತಿ ಲಿಖಿತ ಪರೀಕ್ಷೆಗಳನ್ನು ರದ್ದುಗೊಳಿಸಿದ್ದವು.
ಸುಪ್ರೀಂಕೋರ್ಟ್ ಆದೇಶದಂತೆ ಈ ರಾಜ್ಯಗಳು ಮೌಲ್ಯಮಾಪನ ಮಾನದಂಡಗಳನ್ನು ಪಾಲಿಸಲು ಸಮ್ಮತಿಸಿದ್ದವು. ಈ ಸಂಬಂಧ ನಿನ್ನೆ ವಿಚಾರಣೆ ನಡೆಸಿದ್ದ ನ್ಯಾಯಾಲಯ ಜುಲೈ 31 ರೊಳಗೆ ಸಿಬಿಎಸ್ಇ ಮತ್ತು ಐಸಿಎಸ್ಇ 12ನೇ ತರಗತಿ ಫಲಿತಾಂಶವನ್ನು ಘೋಷಿಸಬೇಕೆಂದು ರಾಜ್ಯ ಶಿಕ್ಷಣ ಮಂಡಳಿಗಳಿಗೆ ನಿರ್ದೇಶನ ನೀಡಿದೆ.
ಇದನ್ನೂ ಓದಿ: ಓರ್ವ ವಿದ್ಯಾರ್ಥಿ ಮೃತಪಟ್ಟರೂ ನೀವೇ ಹೊಣೆ: ಆಂಧ್ರ, ಕೇರಳಕ್ಕೆ ಸುಪ್ರೀಂಕೋರ್ಟ್ ಎಚ್ಚರಿಕೆ
ನಿನ್ನೆ ವಿಚಾರಣೆ ವೇಳೆ ಪರೀಕ್ಷೆ ನಡೆಸುವ ಆಂಧ್ರ ಸರ್ಕಾರದ ನಿರ್ಧಾರವನ್ನ ಪ್ರಶ್ನಿಸಿದ್ದ ಕೋರ್ಟ್, ಕೋವಿಡ್ ಸಾಂಕ್ರಾಮಿಕದ ಪರಿಸ್ಥಿತಿಗಳನ್ನು ಪರಿಶೀಲಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆಯೇ? ಈ ಸಂಬಂಧ ಶೀಘ್ರದಲ್ಲೇ ವರದಿ ನೀಡಿ ಎಂದು ಕೇಳಿತ್ತು.ಇದಕ್ಕೂ ಮುನ್ನ ಮಂಗಳವಾರ ನಡೆದ ವಿಚಾರಣೆ ವೇಳೆ ಓರ್ವ ವಿದ್ಯಾರ್ಥಿ ಮೃತಪಟ್ಟರೂ ನೀವೇ ಹೊಣೆ ಎಂದು ಆಂಧ್ರ ಹಾಗೂ ಕೇರಳ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಎಚ್ಚರಿಕೆ ನೀಡಿತ್ತು.