ಸಹರ್ಸ (ಬಿಹಾರ):ಗೋಪಾಲ್‌ಗಂಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಎಂ ಜಿ ಕೃಷ್ಣಯ್ಯ ಅವರ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಗ್ಯಾಂಗ್ಸ್ಟರ್ ರಾಜಕಾರಣಿ ಆನಂದ್ ಮೋಹನ್ ಸಹರ್ಸ ಮಂಡಲ್ ಜೈಲಿನಿಂದ ಇಂದು ಬಿಡುಗಡೆಗೊಂಡರು. ಮಧ್ಯಾಹ್ನ 2 ಗಂಟೆಗೆ ನಿಗದಿಯಾಗಿದ್ದ ಬಿಡುಗಡೆಯ ಸಮಯಕ್ಕಿಂತ ಮೊದಲೇ ಮಾಜಿ ಸಂಸದನನ್ನು ಜೈಲಿನಿಂದ ಬಿಡುಗಡೆಗೊಳಿಸಲಾಗಿದೆ. ಇವರ ಬಿಡುಗಡೆ ಕುರಿತು ಜೈಲು ಸೂಪರಿಂಟೆಂಡೆಂಟ್ ಅಮಿತ್ ಕುಮಾರ್ ಖಚಿತಪಡಿಸಿದ್ದಾರೆ.
ಆನಂದ್ ಮೋಹನ್ ರೀಲೀಸ್ಗೆ ಕಾರಣವಾಯ್ತು ಜೈಲು ತಿದ್ದುಪಡಿ ನಿಯಮ: ಹೌದು, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸರ್ಕಾರವು ಇತ್ತೀಚೆಗೆ ಬಿಹಾರ ಜೈಲು ಕೈಪಿಡಿ 2012 ರ ನಿಯಮ 481 (i) ಅನ್ನು ತಿದ್ದುಪಡಿ ಮಾಡಿದೆ. ತಿದ್ದುಪಡಿ ಮಾಡುವ ಮುನ್ನ ಜೈಲಿನ ಬಂಧನ ನಿಯಮದ ಪ್ರಕಾರ, ಕರ್ತವ್ಯದಲ್ಲಿರುವ ಸಾರ್ವಜನಿಕ ಸೇವಕನನ್ನು ಕೊಂದ ಯಾವುದೇ ವ್ಯಕ್ತಿಯನ್ನು ಜೈಲಿನಿಂದ ಬಿಡುಗಡೆ ಮಾಡುವುದನ್ನು ನಿಷೇಧಿಸಿತ್ತು. ಹೀಗಾಗಿ ಎಂ ಜಿ ಕೃಷ್ಣಯ್ಯ ಅವರ ಹತ್ಯೆ ಪ್ರಕರಣದಲ್ಲಿ ಆನಂದ್ ಮೋಹನ್ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದರು.
ಆದರೆ, ನಿತೀಶ್ ಸರ್ಕಾರದ ತಿದ್ದುಪಡಿ ಈ ನಿಯಮವನ್ನೇ ಬದಲಾಯಿಸಿದೆ. ಅದೇನೆಂದರೆ, ಕರ್ತವ್ಯದಲ್ಲಿರುವ ಸಾರ್ವಜನಿಕ ನೌಕರನ ಕೊಲೆಯಂತಹ ಪ್ರಕರಣಕ್ಕಿರುವ ಷರತ್ತಗಳನ್ನು ನಿಯಮ ಪುಸ್ತಕದಿಂದ ತೆಗೆದುಹಾಕಲಾಗಿದೆ. ಈ ತಿದ್ದುಪಡಿಯಿಂದಾಗಿ ಒಂದು ವೇಳೆ ಇಂತಹ ಅಪರಾಧಗಳಲ್ಲಿ 14 ವರ್ಷ ಅಥವಾ 20 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಿದಲ್ಲಿ ಅವರನ್ನು ಬಿಡುಗಡೆಗೊಳಿಸುವುದಕ್ಕೆ ಸಾಧ್ಯವಾಗಲಿದೆ. ಹಾಗೆ ಮೊದಲಿದ್ದ ನಿಯಮದನ್ವಯ ಯಾರೆಲ್ಲ ಹತ್ಯೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೋ ಅವರಲ್ಲಿ 27 ಕೈದಿಗಳನ್ನು ಬಿಡುಗಡೆ ಮಾಡಲು ಸೂಚಿಸಲಾಯಿತು. ಈ ಕೈದಿಗಳಲ್ಲಿ ಮಾಫಿಯಾ ರಾಜಕಾರಣಿ ಆನಂದ್ ಮೋಹನ್ ಕೂಡ ಸೇರಿದ್ದು ಈ ಮೂಲಕ ಅವರ ಬಿಡುಗಡೆಯಾಗಿದೆ.
1994 ರಲ್ಲಾಗಿತ್ತು ಎಂ ಜಿ ಕೃಷ್ಣಯ್ಯ ಹತ್ಯೆ: ದಲಿತ ಐಎಎಸ್ ಅಧಿಕಾರಿ, ಗೋಪಾಲ್‌ಗಂಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಎಂ ಜಿ ಕೃಷ್ಣಯ್ಯ ಅವರನ್ನು 1994 ರ ಡಿಸೆಂಬರ್ 5 ರಂದು ಗುಂಪೊಂದು ಹತ್ಯೆ ಮಾಡಿತ್ತು. ಈ ಹತ್ಯೆ ಹಿಂದೆ ರಾಜಕಾರಣಿ ಆನಂದ್ ಮೋಹನ್ ಅವರ ಕೈವಾಡವಿದ್ದು ಈ ಆರೋಪದಡಿ ಕೆಳ ನ್ಯಾಯಾಲಯ ಆನಂದ್ ಮೋಹನ್‌ಗೆ ಮರಣದಂಡನೆ ವಿಧಿಸಿತ್ತು. ಆದರೆ, ಅವರು ಪಾಟ್ನಾ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರು, 2008 ರಲ್ಲಿ ಅವರಿಗೆ ಮರಣದಂಡನೆ ಶಿಕ್ಷೆಯಿಂದ ಜೀವಾವಧಿ ಶಿಕ್ಷೆ ವಿಧಿಸಲಾಯಿತು. 2012ರಲ್ಲಿ ಸುಪ್ರೀಂ ಕೋರ್ಟ್ ಕೂಡ ಪಾಟ್ನಾ ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿದಿತ್ತು. ಹೀಗಾಗಿ ಡಿಎಂ ಹತ್ಯೆ ಪ್ರಕರಣದಲ್ಲಿ ಆನಂದ್ ಮೋಹನ್ ಈಗಾಗಲೇ 14 ವರ್ಷಗಳ ಶಿಕ್ಷೆಯನ್ನು ಅನುಭವಿಸಿದ್ದಾರೆ. ಆದರೆ ನಿಯಮ ತಿದ್ದುಪಡಿಯಿಂದ ಕಾರಗೃಹವಾಸದಿಂದ ಆನಂದ್ ಮೋಹನ್‌ಗೆ ಬಿಡುಗಡೆ ದೊರಕಿದೆ.