ಬಸ್ತಿ(ಉತ್ತರ ಪ್ರದೇಶ):ಭಾರತದಲ್ಲಿ ಪ್ರತಿಭೆಗಳಿಗೆ ಯಾವುದೇ ರೀತಿಯ ಕೊರತೆ ಇಲ್ಲ. ಮೇಲಿಂದ ಮೇಲೆ ಹೊಸ ಹೊಸ ಅನ್ವೇಷನೆ ಮಾಡ್ತಿರುವ ಸುದ್ದಿ ಪ್ರಕಟವಾಗ್ತಾನೆ ಇರ್ತವೆ. ಇಂತಹ ವ್ಯಕ್ತಿಗಳಿಂದ ಪ್ರೇರಿತರಾಗಿ ಉದ್ಯಮಿ ಆನಂದ್ ಮಹೀಂದ್ರಾ ಅನೇಕ ವಿಡಿಯೋ ತುಣುಕುಗಳನ್ನ ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ, ವ್ಯಕ್ತಿಯೊಬ್ಬ ತಯಾರಿಸಿರುವ 'ದೇಸಿ ಫೆರಾರಿ ಕಾರು' ವಿಡಿಯೋ ತುಣುಕವೊಂದನ್ನ ಶೇರ್ ಮಾಡಿಕೊಂಡಿದ್ದಾರೆ.
ಉತ್ತರ ಪ್ರದೇಶದ ಬಸ್ತಿಯ ನಿವಾಸಿ ಶಿವಪೂಜನ್ ದೇಶಿ ಫೆರಾರಿ ಕಾರು ತಯಾರು ಮಾಡಿದ್ದು, ಇದಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ಮಹೀಂದ್ರಾ ಗ್ರೂಪ್ ಸಿಇಒ ಆನಂದ್ ಮಹೀಂದ್ರಾ ಅವರಿಗೂ ಈ ಕಾರು ತುಂಬಾ ಇಷ್ಟವಾಗಿದ್ದು, ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಇದರ ವಿಡಿಯೋ ಶೇರ್ ಮಾಡಿಕೊಳ್ಳುವ ಮೂಲಕ ತಯಾರು ಮಾಡಿರುವ ವ್ಯಕ್ತಿಯನ್ನ ಭೇಟಿ ಮಾಡುವ ಬಯಕೆ ವ್ಯಕ್ತಪಡಿಸಿದ್ದಾರೆ.
ಕಪ್ತಂಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ರೌತಿನ್‌ಪುರ ಗ್ರಾಮದ ನಿವಾಸಿ ಶಿವಪೂಜನ್ ಸ್ವದೇಶಿ ತಂತ್ರಜ್ಞಾನದ ಮೂಲಕ ಈ ಕಾರು ತಯಾರು ಮಾಡಿದ್ದಾರೆ. ಬಾಲ್ಯದಿಂದಲೂ ಹೊಸ ಹೊಸ ವಿಷಯಗಳ ಬಗ್ಗೆ ಆಸಕ್ತಿ ಹೊಂದಿದ್ದ ಶಿವಪೂಜನ್, ಆರ್ಥಿಕ ತೊಂದರೆಯಿಂದಾಗಿ ಇಂಜಿನಿಯರ್ ಆಗುವ ಕನಸು ನನಸಾಗಲಿಲ್ಲ. ಆರಂಭದಲ್ಲಿ ಪೇಂಟಿಂಗ್ ಕೆಲಸ ಮಾಡ್ತಿದ್ದ ಇವರು ತದನಂತರ ಚಿತ್ರ ಬಿಡಿಸುವ ಕೆಲಸ ಸಹ ಮಾಡಲು ಆರಂಭಿಸಿದ್ದರು.
ಗೋಡೆಗೆ ಬಣ್ಣ ಬಳಿಯುವ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗ್ತಿದ್ದರೂ ಸಹ ಹೇಳಿಕೊಳ್ಳುವಂತಹ ಸಂಪಾದನೆ ಬರುತ್ತಿರಲಿಲ್ಲ. ಹೀಗಾಗಿ ಕಳೆದ ಐದು ವರ್ಷಗಳ ಹಿಂದೆ ವೆಲ್ಡಿಂಗ್ ಕಲಿತು ಮನೆಯ ಗೇಟ್, ಗ್ರಿಲ್ ತಯಾರಿಸಲು ಆರಂಭಿಸಿದ್ದಾರೆ. ಕಾರು ತಯಾರಿಸಬೇಕೆಂಬ ಆಲೋಚನೆ ಹುಟ್ಟಿದು ಸಹ ಇಲ್ಲೇ.