ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಮಹೀಂದ್ರಾ ಸಮೂಹ ಸಂಸ್ಥೆಗಳ ಮುಖ್ಯಸ್ಥ ಆನಂದ್ ಮಹೀಂದ್ರಾ ಅವರು ಆಗಾಗ್ಗೆ ತಮ್ಮ ಇನ್ಸ್ಸ್ಟಾಗ್ರಾಮ್, ಟ್ವಿಟರ್ ಖಾತೆಗಳಲ್ಲಿ ಕುತೂಹಲಕಾರಿ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಹೊಸ ವರ್ಷದ ಶುಭ ಸಂದರ್ಭದಲ್ಲಿ ಪೋಸ್ಟ್ ಮಾಡಿರುವ ವಿಡಿಯೋ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮನ ಗೆದ್ದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಟೀಲಿನ ಪ್ರಸಿದ್ಧ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಆವರಣದಿಂದ ಚಿತ್ರೀಕರಿಸಿದ 57 ಸೆಕೆಂಡ್ಗಳ ವಿಡಿಯೋವನ್ನು ಉದ್ಯಮಿ ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ದೇವಾಲಯದ ಆನೆಯ ಮುಂದೆ ಸಾಂಪ್ರದಾಯಿಕ ಉಡುಗೆಯಲ್ಲಿ ಬಾಲಕಿಯೊಬ್ಬಳು ನೃತ್ಯ ಪ್ರದರ್ಶನ ನೀಡುತ್ತಿರುವುದನ್ನು ಕಾಣಬಹುದು. ಆಕೆಯ ಹಿಂಭಾಗದಲ್ಲಿ ಆನೆ ಮತ್ತು ಅದರ ಮಾವುತ ನಿಂತಿದ್ದಾರೆ. ಬಾಲಕಿ ಆನೆಯ ಕಡೆ ತಿರುಗಿ, ಆಶೀರ್ವಾದ ಯಾಚಿಸುವ ಹಾಗೆ ಎರಡೂ ಕೈ ಜೋಡಿಸಿ ನಮಸ್ಕರಿಸಿದಾಗ ಆನೆಯು ಬಹಳ ಸೌಮ್ಯವಾಗಿ ತನ್ನ ಸೊಂಡಿಲನ್ನು ಆಕೆಯ ತಲೆಯ ಮೇಲಿಡುತ್ತದೆ. ಬಳಿಕ ಯುವತಿ ತನ್ನ ನೃತ್ಯ ಮುಂದುವರೆಸಿದಾಗ ಆನೆ ಆಶೀರ್ವಸುವುದನ್ನು ಮುಂದುವರಿಸುತ್ತದೆ ಮತ್ತು ಆಕೆಗೆ ಪ್ರೋತ್ಸಾಹ ನೀಡುವ ಹಾಗೆಯೇ ತನ್ನ ತಲೆ ಅಲ್ಲಾಡಿಸುತ್ತದೆ.
ಶನಿವಾರ ಈ ವಿಡಿಯೋ ಪೋಸ್ಟ್ ಮಾಡಿರುವ ಆನಂದ್ ಮಹೀಂದ್ರಾ, 'ಅದ್ಭುತ ದೃಶ್ಯವಿದು. ಹೊಸ ವರ್ಷದ ಹಿನ್ನೆಲೆಯಲ್ಲಿ ದೇವಸ್ಥಾನದ ಆನೆಯು ನಮಗೆಲ್ಲರಿಗೂ ಸಂತೋಷದಿಂದ ಆಶೀರ್ವಾದ ಮಾಡುತ್ತಿದೆ ಎಂದು ನಾನು ಭಾವಿಸುತ್ತೇನೆ' ಎಂದು ಬರೆದಿದ್ದಾರೆ. ವಿಡಿಯೋ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ 278,000 ಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ಅನೇಕರು ಅದ್ಭುತ ವಿಡಿಯೋ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.