ನವದೆಹಲಿ:ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲ್, ಗಾಂಧೀಜಿ, ಅಂಬೇಡ್ಕರ್, ಭಗತ್ ಸಿಂಗ್ ಸೇರಿದಂತೆ 15 ಮಹನೀಯರ ಚಿತ್ರವನ್ನು ಏಕಕಾಲದಲ್ಲಿ ಒಂದೇ ಹಾಳೆಯ ಮೇಲೆ ಚಿತ್ರ ಬಿಡಿಸುವ ಪ್ರಚಂಡ ಕಲಾವಿದೆಯ ವಿಡಿಯೋ ಈಚೆಗೆ ಭಾರಿ ವೈರಲ್ ಆಗಿದೆ. ಇದನ್ನು ಉದ್ಯಮಿ ಆನಂದ್ ಮಹೀಂದ್ರಾ ಅವರು ಟ್ವೀಟ್ ಮಾಡಿ ಶೇರ್ ಮಾಡಿದ್ದು, ಈ ಪವಾಡ ಚಿತ್ರಕಲಾವಿದೆಗೆ ನೆರವು ನೀಡಲು ನಾನು ಸಿದ್ಧ ಎಂದು ಹೇಳಿದ್ದರು. ಆದರೆ, ಈ ಚಿತ್ರಕಲಾವಿದೆಯ ಅಸ್ತಿತ್ವವೇ ಸುಳ್ಳು ಎಂದು ನೆಟ್ಟಿಗರು ಆರೋಪಿಸಿದ್ದಾರೆ.
ಏನಿದು ವಿಚಿತ್ರ ವಿಡಿಯೋ?:ನೂರ್ ಜಹಾನ್ ಆರ್ಟಿಸ್ಟ್ ಎಂಬ ಹೆಸರಿನ ಯೂಟ್ಯೂಬ್ ಚಾನಲ್ನಲ್ಲಿನ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ. ಚಿತ್ರ ಕಲಾವಿದೆಯ ಹೆಸರು ನೂರ್ಜಹಾನ್ ಎಂದು ಹೇಳಲಾಗಿದೆ. ಈಕೆ ಕಟ್ಟಿಗೆಯ ಸಹಾಯದಿಂದ 15 ಪೆನ್ಗಳನ್ನು ಸಮಾನಾಂತರವಾಗಿ ಕಟ್ಟಿ ಒಂದೇ ಹಾಳೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರು, ರಾಜ, ರಾಣಿಯರು ಸೇರಿದಂತೆ 15 ಜನರ ಚಿತ್ರವನ್ನು ಏಕಕಾಲಕ್ಕೆ ಬಿಡಿಸುತ್ತಾಳೆ.
ಇದು ನಂಬಲು ಅಸಾಧ್ಯವಾದರೂ ವ್ಯಕ್ತಿಯೊಬ್ಬ ವಿಡಿಯೋವನ್ನು ಹಿನ್ನೆಲೆ ಹೇಳಿಕೆಯಲ್ಲಿ ವಿವರಿಸುತ್ತಾನೆ. ಈಕೆಯ ಭಾರತ ಒಂದು ಕುಗ್ರಾಮದ ಬಡ ಬುದ್ಧಿವಂತೆಯಾಗಿದ್ದಾಳೆ. ಈ ವಿಡಿಯೋವನ್ನು ಸಾಧ್ಯವಾದಷ್ಟು ಪಸರಿಸಿ ಮಾಡಿ ಎಂದು ಕೇಳಿಕೊಳ್ಳುತ್ತಾನೆ.
ಇದನ್ನು ಉದ್ಯಮಿ ಆನಂದ್ ಮಹೀಂದ್ರಾ ತಮ್ಮ ಟ್ವೀಟ್ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ರೀತಿ ಚಿತ್ರಿಸಲು ಹೇಗೆ ಸಾಧ್ಯ? ಒಂದೇ ಬಾರಿಗೆ 15 ಭಾವಚಿತ್ರಗಳನ್ನು ಚಿತ್ರಿಸುವುದು ನಿಜಕ್ಕೂ ಪವಾಡವೇ ಸರಿ. ಇದನ್ನು ಯಾರಾದರೂ ದೃಢೀಕರಿಸಬಹುದೇ? ಮಾನ್ಯವಾಗಿದ್ದರೆ ಆಕೆಯನ್ನು ಪ್ರೋತ್ಸಾಹಿಸಬೇಕು. ವಿದ್ಯಾರ್ಥಿವೇತನ ಸೇರಿದಂತೆ ಇತರ ಬೆಂಬಲವನ್ನು ಒದಗಿಸಲು ನಾನು ಇಚ್ಚಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.