ಗೊಡ್ಡಾ (ಜಾರ್ಖಂಡ್): ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ 65 ವರ್ಷದ ಮಹಿಳೆಯೊಬ್ಬರನ್ನು ಯುವಕರ ಗುಂಪೊಂದು ಥಳಿಸಿ ಸಾಯಿಸಿದ ದಾರುಣ ಘಟನೆ ನಡೆದಿದೆ. ಹೋಳಿ ಆಚರಣೆಯ ಸಂದರ್ಭದಲ್ಲಿ ಪಾನಮತ್ತ ಯುವಕರ ಗುಂಪು ಈ ದುಷ್ಕೃತ್ಯ ಎಸಗಿದೆ. ಬುಧವಾರ ಬಲಬದ್ದಾ ಪೊಲೀಸ್ ಠಾಣೆ ವ್ಯಾಪ್ತಿಯ ಅಮೋರ್ ನಿಮಾ ಗ್ರಾಮದಲ್ಲಿ ಘಟನೆ ನಡೆದಿದೆ. ಅಧಿಕೃತ ಮೂಲಗಳ ಪ್ರಕಾರ, ಹೋಳಿ ಬಣ್ಣದಾಟದ ಸಮಯದಲ್ಲಿ ಬಲವಂತವಾಗಿ ಬಣ್ಣ ಎರಚುವುದನ್ನು ವಯಸ್ಸಾದ ಮಹಿಳೆಯೊಬ್ಬರು ವಿರೋಧಿಸಿದ್ದಾರೆ. ಇದೇ ಕಾರಣಕ್ಕೆ ಕುಡಿದ ಮತ್ತಿನಲ್ಲಿದ್ದ ಯುವಕರು ಆಕೆಯನ್ನು ಥಳಿಸಿದ್ದರಿಂದ ಆಕೆ ಮೃತಪಟ್ಟಿದ್ದಾರೆ. ಮೃತರನ್ನು ದುಚ್ಚಿ ದೇವಿ ಎಂದು ಗುರುತಿಸಲಾಗಿದೆ. ಆರೋಪಿಗಳು ಪರಾರಿಯಾಗಿದ್ದು, ಅವರ ಪತ್ತೆಗೆ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ಘಟನೆಯ ಬಗ್ಗೆ ಮಾತನಾಡಿದ ಮೃತ ಮಹಿಳೆಯ ಪುತ್ರ ಮುರಾರಿ ಸಿಂಗ್, ಇದು ಯಾವುದೇ ದ್ವೇಷಕ್ಕಾಗಿ ನಡೆದ ಪ್ರಕರಣವಲ್ಲ. ನಾವು ಯಾರೊಂದಿಗೂ ದ್ವೇಷ ಹೊಂದಿರಲಿಲ್ಲ. ಮದ್ಯದ ಅಮಲಿನಲ್ಲಿ ಹೋಳಿ ಆಚರಿಸುತ್ತಿದ್ದವರು ಬಲವಂತವಾಗಿ ಬಣ್ಣ ಹಚ್ಚುತ್ತಿದ್ದರು ಮತ್ತು ಜೋರಾಗಿ ಗಲಾಟೆ ಮಾಡುತ್ತಿದ್ದರು. ನನ್ನ ತಾಯಿ ಅವರ ಗೂಂಡಾಗಿರಿಯನ್ನು ವಿರೋಧಿಸಿದ್ದಕ್ಕೆ, ಅವರು ಆಕೆಯನ್ನು ಥಳಿಸಲು ಪ್ರಾರಂಭಿಸಿದರು. ಆಕೆಯ ಪ್ರಾಣ ಹೋಗುವವರೆಗೂ ಆವರು ಆಕೆಯನ್ನು ಥಳಿಸಿದರು. ನನ್ನ ತಾಯಿ ಮೃತಪಟ್ಟಿದ್ದಾರೆ ಎಂದು ತಿಳಿದ ನಂತರ ಅವರಿಗೆ ಮೈಮೇಲೆ ಪ್ರಜ್ಞೆ ಬಂದಿತು. ಘಟನೆಯ ಬಗ್ಗೆ ನಮಗೆ ತಿಳಿದ ತಕ್ಷಣ ನಾವು ಪೊಲೀಸರಿಗೆ ಮಾಹಿತಿ ನೀಡಿದೆವು. ಆದರೆ ಪೊಲೀಸರು ಬರುವ ಮೊದಲೇ ಅವರೆಲ್ಲರೂ ಸ್ಥಳದಿಂದ ಪರಾರಿಯಾಗಿದ್ದರು ಎಂದರು.
ಗ್ರಾಮದ ಪಪ್ಪು ಮಂಡಲ್, ಲಲಿತ್ ಮಂಡಲ್, ಸುಭಾಷ್ ಮಂಡಲ್, ಹೀರಾಲಾಲ್ ಮಂಡಲ್, ರಂಜಿತ್ ಮಂಡಲ್ ಮತ್ತು ನೀಲಂ ದೇವಿ ಎಂಬುವರು ತಮ್ಮ ತಾಯಿಯನ್ನು ಹೊಡೆದು ಕೊಂದಿದ್ದಾರೆ ಎಂದು ಮುರಾರಿ ಆರೋಪಿಸಿದ್ದಾರೆ. ನಾವು ಘಟನೆಯ ಬಗ್ಗೆ ಪೊಲೀಸರಿಗೆ ತಿಳಿಸಿದ್ದೇವೆ ಮತ್ತು ಅವರು ಈ ವಿಷಯದ ಬಗ್ಗೆ ತನಿಖೆ ಪ್ರಾರಂಭಿಸಿದ್ದಾರೆ ಎಂದು ಹೇಳಿದರು.