ಹೈದರಾಬಾದ್: ತೆಲಂಗಾಣ ಕಾಂಗ್ರೆಸ್ ನಾಯಕರ ಆಂತರಿಕ ಜಗಳ ತೀಕ್ಷ್ಣಗೊಂಡಿದೆ. ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (ಟಿಪಿಸಿಸಿ) ಅಧ್ಯಕ್ಷರಾಗಿರುವ ರೇವಂತ್ ರೆಡ್ಡಿ ವಿರುದ್ಧ ಹಿರಿಯ ನಾಯಕರು ಮುನಿಸು ಮುಂದುವರೆಸಿದ್ದಾರೆ. ಬೇರೆ ಪಕ್ಷಗಳಿಂದ ವಲಸೆ ಬಂದ ನಾಯಕರಿಗೆ ಕಾಂಗ್ರೆಸ್ ಮಣೆ ಹಾಕುತ್ತಿರುವುದರಿಂದ ಅಸಮಾಧಾನಗೊಂಡ ಪಕ್ಷದ ಹಿರಿಯ ನಾಯಕರು ರೇವಂತ್ ರೆಡ್ಡಿ ನೇತೃತ್ವದಲ್ಲಿ ಭಾನುವಾರ ನಡೆದ ಪಕ್ಷದ ಸಭೆಗೆ ಗೈರಾಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಪಕ್ಷದ ಹಿರಿಯ ನಾಯಕರ ಟೀಕೆಗಳಿಂದ ಬೇಸರಗೊಂಡ ಟಿಡಿಪಿಯ 12 ಮಾಜಿ ನಾಯಕರು ಕಾಂಗ್ರೆಸ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಶಾಸಕಿ ಸೀತಕ್ಕ, ಮಾಜಿ ಶಾಸಕ ವೆಮ್ ನರೇಂದ್ರ ರೆಡ್ಡಿ ಮತ್ತು ಇತರೆ ನಾಯಕರು ಸ್ಥಾನವನ್ನು ತೊರೆದಿದ್ದಾರೆ.
ಏನಿದು ಗಲಾಟೆ: ತೆಲಂಗಾಣ ಚುನಾವಣೆ ಗಮನದಲ್ಲಿರಿಸಿಕೊಂಡು ಪಕ್ಷ ಮುಂದಿನ ತಿಂಗಳು 'ಹಾಥ್ ಸೆ ಹಾಥ್ ಜೋಡೋ' ಅಭಿಯಾನ ನಡೆಸುತ್ತಿದೆ. ಈ ಸಂಬಂಧ ಪ್ರಿಯಾಂಕಾ ಗಾಂಧಿ ನೇತ್ವತ್ವದಲ್ಲಿ ರೇವಂತ್ ರೆಡ್ಡಿ ನಾಯಕತ್ವದಲ್ಲಿ ಭಾನುವಾರ ಗಾಂಧಿ ಭವನದಲ್ಲಿ ಪಕ್ಷ ಸಭೆಯನ್ನು ಆಯೋಜಿಸಿತ್ತು. ಆದರೆ, ಈ ಸಭೆಯಿಂದ ಪ್ರಮುಖ ಹಿರಿಯ ನಾಯಕರು ಅಂತರ ಕಾಯ್ದುಕೊಂಡಿದ್ದರು. ಮಲ್ಲು ಭಟ್ಟಿ ವಿಕ್ರಮರ್ಕ, ಉತ್ತಮಕುಮಾರ್ ರೆಡ್ಡಿ, ದಾಮೋಧರ ರಾಜನರಸಿಂಹ, ಜಗ್ಗರೆಡ್ಡಿ, ಮಧುಯಸ್ಕಿ ಮತ್ತು ಮಹೇಶ್ವರ ರೆಡ್ಡಿ ಗೈರಾಗಿದ್ದರು.