ಹೈದರಾಬಾದ್: ಕೊರೊನಾ ಪರಿಸ್ಥಿತಿಯಲ್ಲಿ ಲಸಿಕೆ ಪಡೆಯುವುದು ಪ್ರಮುಖವಾಗಿದೆ. ಜಗತ್ತಿನಾದ್ಯಂತ ವೈದ್ಯಕೀಯ ವೃತ್ತಿಪರರು ಸಾಧ್ಯವಾದಷ್ಟು ಬೇಗ ಲಸಿಕೆ ಪಡೆಯಬೇಕೆಂದು ಸಲಹೆ ನೀಡುತ್ತಾರೆ. ಲಸಿಕೆ ಕುರಿತು ಸಾಮಾನ್ಯ ಪ್ರಶ್ನೆಗಳಿಗೆ ಇಲ್ಲಿ ಉತ್ತರಿಸಲಾಗಿದ್ದು, ಇದನ್ನು ಓದಿದ ಬಳಿಕ ನೀವು ಲಸಿಕೆ ಪಡೆಯಲು ಹಿಂಜರಿಯುವುದಿಲ್ಲ:
- ಭಾರತದಲ್ಲಿ ಯಾವ ಲಸಿಕೆಗಳು ಲಭ್ಯವಿವೆ?
ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಎಂಬ 2 ವಿಧದ ಲಸಿಕೆಗಳು ಲಭ್ಯವಿವೆ. (ಇವನ್ನು ಎರಡು ಡೋಸ್ಗಳಲ್ಲಿ ನೀಡಲಾಗುತ್ತದೆ)
- ಎರಡು ಡೋಸ್ ಪಡೆಯುವ ನಡುವೆ ಎಷ್ಟು ಸಮಯ ಅಂತರವಿರಬೇಕು?
ಕೊವಾಕ್ಸಿನ್ ಲಸಿಕೆ ಎರಡು ಡೋಸ್ಗಳ ನಡುವೆ ಶಿಫಾರಸು ಮಾಡಿದ ಸಮಯ 4 - 6 ವಾರಗಳು ಮತ್ತು ಕೋವಿಶೀಲ್ಡ್ಗೆ ಇದನ್ನು 4-8 ವಾರಗಳಿಗೆ ಪರಿಷ್ಕರಿಸಲಾಗಿದೆ. ಆದರೂ 12 ವಾರಗಳ ಅಂತರ ಕೂಡಾ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ತೋರಿಸುವ ಅಧ್ಯಯನಗಳಿವೆ.
- ಕೋವಿಶೀಲ್ಡ್ ಅನ್ನು ಮೊದಲ ಡೋಸ್ನಲ್ಲಿ ತೆಗೆದುಕೊಂಡಿದ್ದರೆ ಕೊವಾಕ್ಸಿನ್ ಅನ್ನು ಎರಡನೇ ಡೋಸ್ನಲ್ಲಿ ತೆಗೆದುಕೊಳ್ಳಬಹುದೇ?
ಇಲ್ಲ, ಇವು ಎರಡು ವಿಭಿನ್ನ ರೀತಿಯ ಲಸಿಕೆಗಳು ಮತ್ತು ಎರಡನೆಯ ಡೋಸ್ ಮೊದಲನೆಯ ಲಸಿಕೆಯದ್ದೇ ಆಗಿರಬೇಕು.
- ಕೋವಿಡ್-19 ಸೋಂಕಿಗೆ ತುತ್ತಾಗಿ ಚೇತರಿಸಿಕೊಂಡ ಬಳಿಕವೂ ಲಸಿಕೆ ತೆಗೆದುಕೊಳ್ಳಬೇಕೇ ಅಥವಾ ಅದು ಅಗತ್ಯವಿಲ್ಲವೇ?
ಹೌದು, ಕೋವಿಡ್-19 ಸೋಂಕಿನ ಹಿಂದಿನ ಇತಿಹಾಸವನ್ನು ಲೆಕ್ಕಿಸದೇ ಕೋವಿಡ್ ಲಸಿಕೆ ಸ್ವೀಕರಿಸಲು ಸಲಹೆ ನೀಡಲಾಗುತ್ತದೆ. ರೋಗದ ವಿರುದ್ಧ ಬಲವಾದ ರೋಗನಿರೋಧಕ ಪ್ರತಿಕ್ರಿಯೆಯನ್ನು ಬೆಳೆಸಲು ಇದು ಸಹಾಯ ಮಾಡುತ್ತದೆ.
- ಕೋವಿಡ್-19 ಸೋಂಕಿಗೆ ತುತ್ತಾಗಿಚೇತರಿಸಿಕೊಂಡ ನಂತರ ಲಸಿಕೆ ತೆಗೆದುಕೊಳ್ಳಲು ಎಷ್ಟು ಸಮಯ ಕಾಯಬೇಕು?
MOHFW ಪ್ರಕಾರ ಸೋಂಕಿತ ವ್ಯಕ್ತಿಗಳು ರೋಗಲಕ್ಷಣಗಳು ನಿಂತ ಮೇಲೆ ಕನಿಷ್ಠ 14 ದಿನಗಳವರೆಗೆ ವ್ಯಾಕ್ಸಿನೇಷನ್ ಅನ್ನು ಮುಂದೂಡಬೇಕು. ಜಾಗತಿಕ ಮಟ್ಟದಲ್ಲಿ CDCಯು ಸೋಂಕಿಗೆ ತುತ್ತಾಗಿ 90 ದಿನಗಳ ಅಂತರವನ್ನು ಶಿಫಾರಸು ಮಾಡುತ್ತದೆ.
- ಕುಟುಂಬದ ಸದಸ್ಯರೊಬ್ಬರಿಗೆ ಕೋವಿಡ್ ಪಾಸಿಟಿವ್ ಬಂದ ಮೇಲೂ ಕುಟುಂಬದ ಕೆಲ ಸದಸ್ಯರ ವರದಿ ನೆಗೆಟಿವ್ ಬರುವುದೇಕೆ?
ಮೊದಲ ಕಾರಣವು ತಪ್ಪಾದ ನೆಗೆಟಿವ್ ವರದಿಯಾಗಿರಬಹುದು. ಆರೋಗ್ಯ ತಜ್ಞರ ಅಂದಾಜಿನ ಪ್ರಕಾರ, ಕೊರೊನಾ ಸೋಂಕಿಗೆ ಒಳಗಾದ ಸುಮಾರು ಮೂರನೇ ಒಂದು ಭಾಗದಷ್ಟು ರೋಗಿಗಳು ಪರೀಕ್ಷಾ ಫಲಿತಾಂಶವನ್ನು ನೆಗೆಟಿವ್ ಎಂದು ಪಡೆಯುತ್ತಾರೆ. ಇನ್ನೊಂದು ಕಾರಣ ಎಂದರೆ, ಅವರು ಈ ಹಿಂದೆ ಕೊರೊನಾ (ಲಕ್ಷಣರಹಿತ,asymptomatic) ಸೋಂಕಿಗೆ ಒಳಗಾಗಿದ್ದರಿಬಹುದು ಮತ್ತು ಅಂಥವರು ಸೋಂಕಿನ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಅಭಿವೃದ್ಧಿಪಡಿಸಿರುತ್ತಾರೆ.
- ಸೋಂಕು ಹರಡುವಿಕೆ ತಪ್ಪಿಸಲು ಸ್ವಯಂ-ಸಂಪರ್ಕತಡೆ ಮುಖ್ಯವಾಗಿದೆ ಮತ್ತು ಸೌಮ್ಯಲಕ್ಷಣ ಹೊಂದಿರುವ ಸೋಕಿತರಿಗೆ ಆಸ್ಪತ್ರೆ ಅಗತ್ಯವಿಲ್ಲವೇ?
ಖಂಡಿತವಾಗಿಯೂ ಹೌದು. ಕೋವಿಡ್-19ನ ಹೆಚ್ಚಿನ ಪ್ರಕರಣಗಳು ಸೌಮ್ಯ ಲಕ್ಷಣಗಳನ್ನು ಹೊಂದಿದ್ದು, ಮನೆಯಲ್ಲಿಯೇ ಸಂಪರ್ಕತಡೆಯನ್ನು ಸುಲಭವಾಗಿ ನಿರ್ವಹಿಸಬಹುದು ಮತ್ತು ಆಸ್ಪತ್ರೆಗೆ ಸೇರಿಸುವ ಅಗತ್ಯವಿಲ್ಲ. ರೋಗಲಕ್ಷಣಗಳು ತೀವ್ರವಾಗಿದ್ದರೆ ಮತ್ತು ಕೊಮೊರ್ಬಿಡಿಟಿ ಹೊಂದಿರುವವರಿಗೆ ಸೌಮ್ಯಲಕ್ಷಣ ಇದ್ದರೆ ಆಸ್ಪತ್ರೆಗೆ ದಾಖಲು ಮಾಡಬೇಕಾಗುತ್ತದೆ.
- ಕೊರೊನಾ ಸೋಂಕು ತಡೆಗಟ್ಟಲು ಹಾಗೂ ಸೋಂಕಿನಿಮದ ಗುಣಮುಖರಾಗಲು ಸಾಕಷ್ಟು ಔಷಧಿಗಳು ಲಭಿಸುತ್ತಿವೆ. ಈ ಔಷಧಗಳನ್ನು ಮುನ್ನೆಚ್ಚರಿಕಾ ಕ್ರಮವಾಗಿ ಇಟ್ಟುಕೊಳ್ಳಬೇಕೇ ಅಥವಾ ವೈದ್ಯರು ಶಿಫಾರಸು ಮಾಡಿದ್ದನ್ನು ಮಾತ್ರ ತೆಗೆದುಕೊಳ್ಳಬೇಕೇ?
ವೈದ್ಯರು ಶಿಫಾರಸ್ಸು ಮಾಡುವ ಔಷಧ ಮಾತ್ರ ಸೇವಿಸಿ. ವೈದ್ಯರ ದೃಢೀಕರಣವಿಲ್ಲದೇ ಔಷಧಗಳ ಸೇವನೆ ರೋಗಕ್ಕಿಂತ ಹೆಚ್ಚು ಹಾನಿಕಾರಕವಾಗಿದೆ!
- ಸಾಕುಪ್ರಾಣಿಗಳು ಕೋವಿಡ್-19ಗೆ ತುತ್ತಾಗುತ್ತವೆಯೇ?
CDC ಪ್ರಕಾರ, ಬೆಕ್ಕುಗಳು ಮತ್ತು ನಾಯಿಗಳು ಸೇರಿದಂತೆ ವಿಶ್ವದಾದ್ಯಂತ ಕೆಲವೇ ಕೆಲವು ಸಾಕುಪ್ರಾಣಿಗಳು ಕೋವಿಡ್-19ಗೆ ಕಾರಣವಾಗುವ ವೈರಸ್ ಸೋಂಕಿಗೆ ಒಳಗಾಗುತ್ತವೆ ಎಂದು ವರದಿಯಾಗಿದೆ. ಇಲ್ಲಿಯವರೆಗೆ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ, ಪ್ರಾಣಿಗಳಿಗೆ ಕೋವಿಡ್-19 ಅನ್ನು ಜನರಿಗೆ ಹರಡುವ ಅಪಾಯ ಕಡಿಮೆ ಎಂದು ಪರಿಗಣಿಸಲಾಗಿದೆ. ಕೋವಿಡ್-19ಗೆ ಕಾರಣವಾಗುವ ವೈರಸ್ ಕೆಲವು ಸಂದರ್ಭಗಳಲ್ಲಿ ಜನರಿಂದ ಪ್ರಾಣಿಗಳಿಗೆ ಹರಡಬಹುದು.
- ರೋಗಲಕ್ಷಣಗಳನ್ನು ಅನುಭವಿಸಿದ ನಂತರ ಕೋವಿಡ್-19 ಪರೀಕ್ಷೆಗೆ ಒಳಗಾಗಲು ಎಷ್ಟು ಸಮಯ ಕಾಯಬೇಕು?
ಕಾಯುವ ಅಗತ್ಯವಿಲ್ಲ, ರೋಗಲಕ್ಷಣಗಳನ್ನು ಅನುಭವಿಸಿದರೆ ತಕ್ಷಣ ಪರೀಕ್ಷಿಸಿ.