ಒಡಿಶಾ :ಹಣದ ಹಿಂದೆ ನಾವು ಹೋಗಬಾರದು, ಬದಲಿಗೆ ಹಣವೇ ನಮ್ಮ ಹಿಂದೆ ಬರಬೇಕು. ಈ ಮಾತಿಗೆ ತಕ್ಕ ಹಾಗೆ ನಡೆದುಕೊಳ್ಳುತ್ತಿದ್ದಾರೆ ಡಾ. ಶಿಶಿರ್ ಕುಮಾರ್ ಸಾಹು. ಒಡಿಶಾದ ಭಾರಘರ್ ಮೂಲದ ಇವರು, ವೃತ್ತಿಯಲ್ಲಿ ವೈದ್ಯ. ಅದರಿಂದಲೇ ಸಮಾಜಕ್ಕೆ ನಿಸ್ವಾರ್ಥ ಮತ್ತು ಉಚಿತ ಸೇವೆ ನೀಡುತ್ತಿದ್ದಾರೆ.
ಡಾ. ಶಿಶಿರ್ ಕುಮಾರ್ ಅವರು ರೋಗಿಗಳಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ. ಬಡ ರೋಗಿಗಳಿಗೆ ಉಚಿತ ಆಹಾರ ನೀಡಿ, ಅವರ ಮನೆಗಳಿಗೆ ಹಿಂದಿರುಗುವ ಪ್ರಯಾಣದ ವ್ಯವಸ್ಥೆಗಳನ್ನು ಸಹ ಮಾಡುತ್ತಾರೆ. ಈ ಮೂಲಕ ರೋಗಿಗಳ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ.
ಇಂದಿನ ಕಾಲದಲ್ಲಿ ಯಾವುದೇ ಹಣ ವಿಧಿಸದೆ ಉಚಿತ ಸೇವೆ ಒದಗಿಸುತ್ತಿರುವುದು ನಿಜಕ್ಕೂ ಅಪರೂಪ. ನಿರ್ಗತಿಕರಿಗೆ ಉತ್ತಮ ಸೇವೆ ಒದಗಿಸುವುದು ಅವರ ಉದ್ದೇಶವಾಗಿದೆ. ಅವರು ರೋಗಿಗಳಿಂದ ಕೇವಲ ಹತ್ತು ರೂಪಾಯಿ ಶುಲ್ಕ ವಿಧಿಸುತ್ತಾರೆ. ಆದ್ದರಿಂದ ಅವರನ್ನು ಹತ್ತು ರೂಪಾಯಿ ಡಾಕ್ಟರ್ ಎಂದು ಜನ ಕರೆಯುತ್ತಾರೆ.
ಯಾವುದೇ ಶುಲ್ಕವಿಲ್ಲದೆ ಉಚಿತ ಸೇವೆ ನೀಡುತ್ತಿರುವ ವೈದ್ಯರು ಡಾ. ಸಾಹು ಅವರು 1972ರಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆಗೆ ಸೇರಿದ್ದರು. ಆ ಸಮಯದಲ್ಲಿಯೂ ಅವರು ಆಸ್ಪತ್ರೆಗೆ ಬರಲು ಸಾಧ್ಯವಾಗದ ಬಡ ಮತ್ತು ಅಸಹಾಯಕ ರೋಗಿಗಳಿಗೆ ಮನೆ ಬಾಗಿಲಿಗೆ ಹೋಗಿ ಸೇವೆ ನೀಡುತ್ತಿದ್ದರು. ಈಗ ಅವರಿಗೆ 76 ವರ್ಷ ವಯಸ್ಸಾದ್ರೂ ಯಾವುದೇ ವಿರಾಮವಿಲ್ಲದೇ ಜನರಿಗೆ ತನ್ನ ಸೇವೆ ಮುಂದುವರಿಸಿದ್ದಾರೆ.
ಮುಖ್ಯ ಜಿಲ್ಲಾ ವೈದ್ಯಕೀಯ ಅಧಿಕಾರಿಯಾಗಿ 2002ರಲ್ಲಿ ಅಧಿಕಾರ ವಹಿಸಿಕೊಂಡ ನಂತರ, ಅವರು ಸೊಹೆಲಾದಲ್ಲಿ ಕ್ಲಿನಿಕ್ ಸ್ಥಾಪಿಸುವ ಮೂಲಕ ತಮ್ಮ ಸೇವೆ ಮುಂದುವರೆಸಿದರು. ಅಲ್ಲಿನ ಸ್ಥಳೀಯರು ಅವರನ್ನು ತಮ್ಮ ಕುಟುಂಬದ ಸದಸ್ಯರಂತೆ ನೋಡುತ್ತಾರೆ. ಮತ್ತು ಅವರು ಸಹ ಎಲ್ಲರೊಂದಿಗೆ ಪರಸ್ಪರ ಪ್ರೀತಿಯಿಂದ ಇದ್ದಾರೆ. ಸಮಾಜ ಸೇವಕರಾಗಿ ಡಾ. ಸಾಹು ಖಂಡಿತವಾಗಿಯೂ ಎಲ್ಲಾ ತಲೆಮಾರಿನ ವೈದ್ಯರಿಗೆ ಸ್ಫೂರ್ತಿ.