ನವದೆಹಲಿ: ನೆರೆಯ ದೇಶ ಚೀನಾದ ಜನರಲ್ಲಿ ಉಸಿರಾಟದ ಕಾಯಿಲೆಯ ಪ್ರಕರಣಗಳು ಹೆಚ್ಚುತ್ತಿದ್ದು ಮತ್ತೆ ಕೋವಿಡ್ನಂತಹ ವೈರಸ್ ಬರಬಹುದೇ ಎಂಬ ಆತಂಕ ಎದುರಾಗಿದೆ. ಈ ಕುರಿತು ಏಮ್ಸ್ನ ಡಾ.ಎಸ್.ಕೆ.ಕಾಬ್ರಾ ಮಾಹಿತಿ ನೀಡಿದ್ದಾರೆ. ಚಳಿಗಾಲದಲ್ಲಿ ವೈರಲ್ ಸೋಂಕುಗಳು ಸಾಮಾನ್ಯ. ಇನ್ನು ಮುಂದೆ ಕೋವಿಡ್ನಂತಹ ಮತ್ತೊಂದು ಸಾಂಕ್ರಾಮಿಕ ರೋಗದ ಸಾಧ್ಯತೆ ಇಲ್ಲ ಎಂದು ಅವರು ಹೇಳಿದರು.
ಇತ್ತೀಚಿನ ದಿನಗಳಿಂದ ಉತ್ತರ ಚೀನಾದ ಮಕ್ಕಳಲ್ಲಿ ನ್ಯುಮೋನಿಯಾದಂತಹ ಉಸಿರಾಟದ ಕಾಯಿಲೆ ಗಮನಾರ್ಹವಾಗಿ ಉಲ್ಬಣವಾಗಿದೆ. ಚೀನಾದ ಆರೋಗ್ಯ ಇಲಾಖೆಯ ವರದಿಯಂತೆ, ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನ ನಡುವೆ ಉಸಿರಾಟದ ಸೋಂಕುಗಳ ಕಾಯಿಲೆಯಲ್ಲಿ ಹಠಾತ್ ಹೆಚ್ಚಳವಾಗಿದೆ. ಅಲ್ಲದೆ ಈ ಆರೋಗ್ಯ ಸಮಸ್ಯೆ ಮಕ್ಕಳಲ್ಲಿ ಅಧಿಕ. ಉಸಿರಾಟದ ಕಾಯಿಲೆ ಹೊಂದಿರುವ ರೋಗಿಗಳ ಪರೀಕ್ಷೆಯಲ್ಲಿ ಮೈಕೋಪ್ಲಾಸ್ಮಾ ಬ್ಯಾಕ್ಟೀರಿಯಾ ಕಾಣಿಸಿಕೊಂಡಿದೆ. ಈ ವೈರಸ್ ಬಿಟ್ಟು ಬೇರೆ ಯಾವುದೇ ಹೊಸ ಅಥವಾ ಅಸಾಮಾನ್ಯ ವೈರಸ್‌ಗಳನ್ನು ನಾವು ನೋಡಿಲ್ಲ. ಇದು ಹೊಸ ಜೀವಿ ಎಂಬುದಕ್ಕೆ ಇನ್ನೂ ಯಾವುದೇ ಆಧಾರಗಳಿಲ್ಲ. ಇದು ಅಂದಿನ ಕೋವಿಡ್ ರೀತಿಯ ಸಾಂಕ್ರಾಮಿಕ ಕಾಯಿಲೆಯನ್ನು ಉಂಟುಮಾಡಬಹುದೇ ಎಂದು ಹೇಳುವುದು ಕಷ್ಟ. ಆದರೆ ಅಂಥ ಸಾಧ್ಯತೆ ಕಡಿಮೆ. ಚೀನಾದಿಂದ ಬಂದಿರುವ ವರದಿಗಳಲ್ಲಿ ಚಳಿಗಾಲದಲ್ಲಿ ಸಾಮಾನ್ಯ ವೈರಸ್‌ಗಳು ಕಂಡುಬರುತ್ತವೆ ಎಂದು ತಿಳಿಸಿದ್ದಾರೆ.
ಮುಂದುವರೆದು ಮಾತನಾಡಿ, ಈ ಕುರಿತು ಈಗಾಗಲೇ ತಜ್ಞರು ಚರ್ಚಿಸಿದ್ದು, ಕೆಲ ವಿಚಾರಗಳನ್ನು ತಿಳಿಸಿದ್ದಾರೆ. ಚಳಿಗಾಲದಲ್ಲಿ ವೈರಸ್ ಸೋಂಕು ಸಾಮಾನ್ಯವಾಗಿದೆ. ಇಲ್ಲಿನ ಸಾಮಾನ್ಯ ವೈರಸ್ಗಳಲ್ಲಿ ಮುಖ್ಯವಾದವುಗಳೆಂದರೆ ಇನ್ಫ್ಲುಯೆನ್ಸ, ಅಡೆನೊವೈರಸ್ ಮತ್ತು ಮೈಕೋಪ್ಲಾಸ್ಮಾ. ಇಲ್ಲಿಯವರೆಗೆ ಚೀನಾದಲ್ಲಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳ ವರದಿಗಳಲ್ಲಿ ಅದೇ ವೈರಸ್‌ಗಳು ಗೋಚರಿಸುತ್ತಿದ್ದು, ಹೊಸದೇನೂ ಪತ್ತೆಯಾಗಿಲ್ಲ. ಈಗಾಗಲೇ ಕೊರೊನಾದಿಂದ ಒಮ್ಮೆ ಬದುಕಿ ಬಂದಿರುವ ಜನರು ಮತ್ತೆ ಹೊಸ ವೈರಸ್ ಬಂದಿದೆಯೇ ಎಂದು ಚಿಂತಿತರಾಗಿದ್ದಾರೆ. ಚೀನಾದಲ್ಲಿ ಲಾಕ್‌ಡೌನ್ ಸಡಿಲಗೊಳಿಸದ ನಂತರ ಇದೇ ಮೊದಲ ಚಳಿಗಾಲವಾಗಿದ್ದು, ಈ ಅವಧಿಯಲ್ಲಿ ಉಸಿರಾಟಕ್ಕೆ ಸಂಬಂಧಪಟ್ಟ ಕಾಯಿಲೆಯ ಪ್ರಕರಣಗಳು ಹೆಚ್ಚುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದರು.