ಪಾಲಕ್ಕಾಡ್ (ಕೇರಳ):ಕೇರಳದ ಪಾಲಕ್ಕಾಡ್ ಜಿಲ್ಲೆಯ ಅಟ್ಟಪ್ಪಾಡಿ ಅರಣ್ಯ ಪ್ರದೇಶದ ಸಮೀಪ ಬುಡಕಟ್ಟು ಮಹಿಳೆಯೊಬ್ಬರ ಮೇಲೆ ದಾಳಿ ಮಾಡಿದ ಕಾಡಾನೆ, ಅವರನ್ನು ಅವರ ಮನೆಯ ಹೊರಗೆ ತುಳಿದು ಸಾಯಿಸಿದ ದಾರುಣ ಘಟನೆ ಗುರುವಾರ ಮಧ್ಯರಾತ್ರಿ ನಡೆದಿದೆ.
ಮಧ್ಯರಾತ್ರಿ 2 ಗಂಟೆಯ ಸುಮಾರಿಗೆ ಜಾನುವಾರುಗಳು ಜೋರಾಗಿ ಶಬ್ದ ಮಾಡುತ್ತಿದ್ದುದನ್ನು ಕೇಳಿಸಿಕೊಂಡ ಮಹಿಳೆ ಏನಾಗುತ್ತಿದೆ ಎಂದು ನೋಡಲು ತನ್ನ ಪತಿಯೊಂದಿಗೆ ಹೊರಗೆ ಬಂದಾಗ ಈ ದುರ್ಘಟನೆ ಸಂಭವಿಸಿದೆ ಎಂದು ಪ್ರದೇಶದ ರೇಂಜ್ ಫಾರೆಸ್ಟ್ ಆಫೀಸರ್ ತಿಳಿಸಿದ್ದಾರೆ.
ಇಬ್ಬರೂ ಹೊರಗೆ ಬಂದ ನಂತರ ಪತಿ ಶೌಚಾಲಯಕ್ಕೆ ತೆರಳಿದ್ದಾರೆ. ಆದರೆ ಮಹಿಳೆ ದನದ ಕೊಟ್ಟಿಗೆಯೊಳಗೆ ಹೋಗಿದ್ದು, ಅಲ್ಲಿನ ದೀಪ ಆನ್ ಮಾಡದ್ದರಿಂದ ಆನೆ ನಿಂತಿರುವುದು ಕಾಣಿಸಿಲ್ಲ. ಆನೆಯ ಹತ್ತಿರಕ್ಕೆ ಹೋದಾಗ, ದಾಳಿ ಮಾಡಿದ ಆನೆ ಸ್ಥಳದಲ್ಲೇ ಮಹಿಳೆಯನ್ನು ತುಳಿದು ಸಾಯಿಸಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು.
ಘಟನೆ ಸಂಭವಿಸಿದ ಸ್ಥಳದಿಂದ ಕೇವಲ 150 ಮೀಟರ್ ದೂರದಲ್ಲಿ ದಟ್ಟಾರಣ್ಯದ ಗಡಿ ಆರಂಭವಾಗುತ್ತದೆ. ಹೀಗಾಗಿ ಅಲ್ಲಿ ಸದಾ ಕಾವಲಿಗಿರುವ ಅರಣ್ಯ ಅಧಿಕಾರಿಗಳು ಘಟನೆ ನಡೆದ ಕೂಡಲೇ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ ಮತ್ತು ಕಾಡಾನೆಯನ್ನು ಬೆದರಿಸಿ ಮರಳಿ ಕಾಡಿಗೆ ಅಟ್ಟುವಲ್ಲಿ ಸಫಲರಾಗಿದ್ದಾರೆ.
ಘಟನೆಯಲ್ಲಿ ಮತ್ತಾರಿಗೂ ಗಾಯವಾಗಿಲ್ಲ. ದಾಳಿ ಮಾಡಿದ ಕಾಡಾನೆಯು ಇತ್ತೀಚೆಗೆ ಕಾಡಿನೊಳಗೆ ಅಟ್ಟಲಾಗಿದ್ದ ಎಂಟು ಆನೆಗಳ ಹಿಂಡಿನ ಸದಸ್ಯನಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.