ಭುವನೇಶ್ವರ(ಒಡಿಶಾ): ಒಡಿಶಾದ ಮಾಜಿ ಅಧಿಕಾರಿ ವಿ.ಕೆ.ಪಾಂಡಿಯನ್ ಅವರು ಬಿಜು ಜನತಾ ದಳಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಇಲ್ಲಿನ ಸಿಎಂ ನವೀನ್ ಪಟ್ನಾಯಕ್ ಅವರ ನಿವಾಸದಲ್ಲಿ ಪಾಂಡಿಯನ್ ಬಿಜೆಡಿ ಸೇರಿದರು.
"ಇಂದು ನಮ್ಮ ಪಕ್ಷದ ಮುಖ್ಯಸ್ಥ ಮತ್ತು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ವಿ.ಕೆ.ಪಾಂಡಿಯನ್ ಅವರನ್ನು ಅಧಿಕೃತವಾಗಿ ಬಿಜೆಡಿಗೆ ಬರಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ನವೀನ್ ಪಟ್ನಾಯಕ್, ಪಾಂಡಿಯನ್ ಅವರು ಅಧಿಕಾರಿಯಾಗಿ ಒಡಿಶಾದ ಜನರಿಗೆ ಸೇವೆ ಸಲ್ಲಿಸಿದಂತೆ ಈಗಲೂ ತಮ್ಮ ಸೇವೆಯನ್ನು ಮುಂದುವರಿಸಲಿ ಎಂದು ಹಾರೈಸಿದರು" ಎಂದು ಬಿಜೆಡಿ ಹಿರಿಯ ನಾಯಕ ದೇಬಿ ಮಿಶ್ರಾ ಎಎನ್ಐಗೆ ತಿಳಿಸಿದರು.
ಈ ವರ್ಷದ ಅಕ್ಟೋಬರ್ನಲ್ಲಿ ವಿ.ಕೆ.ಪಾಂಡಿಯನ್ ಅವರನ್ನು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸರ್ಕಾರದ 5 ಟಿ (ಟ್ರಾನ್ಸ್ಫಾರ್ಮೇಶನಲ್ ಇನಿಶಿಯೇಟಿವ್) ಮತ್ತು 'ನಬಿನ್ ಒಡಿಶಾ' ಇವುಗಳ ಅಧ್ಯಕ್ಷರಾಗಿ ನೇಮಿಸಲಾಗಿತ್ತು. ಈ ಅಧ್ಯಕ್ಷ ಸ್ಥಾನಕ್ಕೆ ಕ್ಯಾಬಿನೆಟ್ ಸಚಿವರ ದರ್ಜೆಯ ಸ್ಥಾನಮಾನ ನೀಡಲಾಗಿದೆ. ಸದ್ಯ ಒಡಿಶಾ ಮುಖ್ಯಮಂತ್ರಿಯ ಖಾಸಗಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಐಎಎಸ್ ಅಧಿಕಾರಿ ಪಾಂಡಿಯನ್ ಸ್ವಯಂ ನಿವೃತ್ತಿ ಕೋರಿದ್ದರು. ಸ್ವಯಂ ನಿವೃತ್ತಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ ಒಂದು ದಿನದ ನಂತರ ಪಾಂಡಿಯನ್ ರಾಜಕೀಯಕ್ಕೆ ಧುಮುಕಿದ್ದಾರೆ.
ವಿ.ಕೆ.ಪಾಂಡಿಯನ್ 2000ನೇ ಬ್ಯಾಚ್‌ನ ಒಡಿಶಾ ಕೇಡರ್‌ನ ಐಎಎಸ್ ಅಧಿಕಾರಿ. ಅವರು ಕಲಹಂಡಿ ಜಿಲ್ಲೆಯಲ್ಲಿರುವ ಧರ್ಮಗಢದಲ್ಲಿ ಉಪ-ಕಲೆಕ್ಟರ್ ಆಗಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದರು. ನಂತರ ಮುಖ್ಯಮಂತ್ರಿ ಕಚೇರಿಯಲ್ಲಿ ನಿಯೋಜನೆಗೊಳ್ಳುವ ಮೊದಲು ಮಯೂರ್ಭಂಜ್ ಮತ್ತು ಗಂಜಾಂ ಜಿಲ್ಲೆಗಳಲ್ಲಿ ಕಲೆಕ್ಟರ್ ಆಗಿ ಸೇವೆ ಸಲ್ಲಿಸಿದ್ದರು. ಕಳೆದ 10 ವರ್ಷಗಳಲ್ಲಿ, ಪಾಂಡಿಯನ್ ಪಟ್ನಾಯಕ್ ಸರ್ಕಾರದ ಅನೇಕ ನಿರ್ಣಾಯಕ ನಿರ್ಧಾರಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.