ರಾಜೌರಿ (ಜಮ್ಮು ಮತ್ತು ಕಾಶ್ಮೀರ) :ಜಮ್ಮು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಗುರುವಾರ ಭೂಕಂಪನ ಉಂಟಾಗಿ, ಆತಂಕದ ವಾತಾವರಣ ನಿರ್ಮಾಣವಾಗಿತ್ತು. ರಾತ್ರಿ 3.49 ನಿಮಿಷಕ್ಕೆ ಭೂಮಿ ನಡುಗಿದೆ. ರಿಕ್ಟರ್ ಮಾಪಕದಲ್ಲಿ 3.6 ತೀವ್ರತೆ ದಾಖಲಾಗಿದೆ ಎಂದು ಭೂಕಂಪನಶಾಸ್ತ್ರ ರಾಷ್ಟ್ರೀಯ ಕೇಂದ್ರ ತಿಳಿಸಿದೆ.
ರಾಜೌರಿಯ ಸಮೀಪದಲ್ಲಿ ಕಂಪನದ ಕೇಂದ್ರಬಿಂದು ಕಂಡುಬಂದಿದೆ. 10 ಕಿಮೀ ಆಳದಲ್ಲಿ ಭೂಕಂಪದ ಅಲೆಗಳು ಎದ್ದಿವೆ. ಈವರೆಗೂ ಯಾವುದೇ ಅನಾಹುತಗಳ ಬಗ್ಗೆ ವರದಿಯಾಗಿಲ್ಲ. ರಾತ್ರೋರಾತ್ರಿ ಭೂಮಿ ನಡುಗಿದ ಕಾರಣ ಜನರು ಆತಂಕಗೊಂಡಿದ್ದಾರೆ.
ಮಹಾರಾಷ್ಟ್ರದಲ್ಲಿ ಕಂಪಿಸಿದ ಭೂಮಿ:ನಿನ್ನೆ(ಬುಧವಾರ) ಮಹಾರಾಷ್ಟ್ರ ಕೊಲ್ಲಾಪುರ ಸೇರಿದಂತೆ ಸಾಂಗ್ಲಿ, ಸತಾರಾ ಜಿಲ್ಲೆಯಲ್ಲಿ ಭೂಮಿ ಕಂಪಿಸಿದ ಅನುಭವವಾಗಿತ್ತು. ಭೂಕಂಪದ ಕೇಂದ್ರ ಬಿಂದು ಸತಾರಾ ಜಿಲ್ಲೆಯ ಕೊಯ್ನಾ ಅಣೆಕಟ್ಟಿನಿಂದ ಕೇವಲ ಇಪ್ಪತ್ತು ಕಿಲೋ ಮೀಟರ್ ದೂರದಲ್ಲಿತ್ತು. ಏಕಾಏಕಿ ಭೂಮಿ ನಡುಕ ಉಂಟಾಗಿದ್ದರಿಂದ ನಾಗರಿಕರು ಭಯಗೊಂಡಿದ್ದರು. ಭೂಕಂಪ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 3.4 ದಾಖಲಾಗಿತ್ತು.
ಸತಾರಾ ಜಿಲ್ಲೆಯ ಕೊಯ್ನಾ ಅಣೆಕಟ್ಟು ಮತ್ತು ಅಭಯಾರಣ್ಯ ಪ್ರದೇಶದಲ್ಲಿ ಭೂಕಂಪನದ ಅನುಭವವಾಗಿದೆ. ಜಿಲ್ಲೆಯ ಪಟಾನ್ ನಗರ ಹಾಗೂ ಸಮೀಪದ ಗ್ರಾಮಗಳಲ್ಲಿ ಬೆಳಗ್ಗೆ 6.40 ರ ಸುಮಾರಿಗೆ ಭೂಮಿ ನಡುಗಿದೆ. ಬೆಳಗಿನ ವಾಕಿಂಗ್‌ಗೆ ತೆರಳಿದ್ದ ನಾಗರಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.