ಲೂಧಿಯಾನ್(ಪಂಜಾಬ್): ಪಂಜಾಬ್ ಪೊಲೀಸ್ ಇಲಾಖೆಯಲ್ಲಿ ಎಎಸ್ಐ ಆಗಿ ಕೆಲಸ ಮಾಡ್ತಿರುವ ಲೂಧಿಯಾನ ನಿವಾಸಿ ಸುನೀತಾ ರಾಣಿ, ಕಳೆದ ನಾಲ್ಕು ವರ್ಷಗಳಿಂದಲೂ ಅನಾಥ ಶವಗಳ ಅಂತ್ಯಕ್ರಿಯೆ ನಡೆಸುತ್ತಿದ್ದು, ಅನೇಕರ ಮನಗೆದ್ದಿದ್ದಾರೆ. ವಿಶೇಷವೆಂದರೆ ತಮ್ಮ ಸ್ವಂತ ಖರ್ಚಿನಲ್ಲೇ ಶವಗಳ ಅಂತ್ಯಸಂಸ್ಕಾರ ನಡೆಸುವ ಮೂಲಕ ಅವುಗಳಿಗೆ ಮುಕ್ತಿ ನೀಡುವ ಕೆಲಸ ಮಾಡ್ತಿದ್ದಾರೆ. 2019ರಲ್ಲಿ ಈ ಸೇವೆ ಪ್ರಾರಂಭಿಸಿರುವ ಇವರು, ಇಲ್ಲಿಯವರೆಗೆ 2200 ಮೃತದೇಹಗಳ ಅಂತ್ಯಕ್ರಿಯೆ ನಡೆಸಿದ್ದಾರೆ.
ಅಂತ್ಯಕ್ರಿಯೆ ನಡೆಸುವುದಕ್ಕೂ ಮುಂಚಿತವಾಗಿ ಸಾಂಪ್ರದಾಯಿಕ ವಿಧಿ-ವಿಧಾನ ನಡೆಸುವ ಅವರು, ಮೃತದೇಹಗಳ ಅವಶೇಷ ಬಿಯಾಸ್ ನದಿಯಲ್ಲಿ ಬಿಡುತ್ತಾರೆ. ಸುನೀತಾ ರಾಣಿ ಅವರ ಸೇವೆ ಲೂಧಿಯಾನದ ಕೆಲವೇ ಪೊಲೀಸ್ ಅಧಿಕಾರಿಗಳಿಗೆ ಮಾತ್ರ ಗೊತ್ತಿದ್ದು, ಯಾವುದೇ ಆಸ್ಪತ್ರೆಯಿಂದ ಕರೆ ಬಂದರೂ, ಅಲ್ಲಿಗೆ ತೆರಳಿ, ಮೃತದೇಹಗಳ ಶವಸಂಸ್ಕಾರ ಮಾಡ್ತಾರೆ.
ಸ್ವಃತ ಹಣದಿಂದಲೇ ಖರ್ಚು:ಮೃತದೇಹಗಳ ಅಂತ್ಯಸಂಸ್ಕಾರ ನಡೆಸುವ ಸುನೀತಾ ರಾಣಿ, ಎಲ್ಲ ಖರ್ಚು ತಮ್ಮ ಸಂಬಳದಿಂದಲೇ ಭರಿಸುತ್ತಾರೆ. ಈ ಸೇವೆ ಆರಂಭ ಮಾಡಿದಾಗ ಅನೇಕರು ಇವರೊಂದಿಗೆ ಸೇರಿಕೊಂಡಿದ್ದರು. ಆದರೆ, ತದನಂತರ ಅವರೆಲ್ಲರೂ ಹಿಂದೆ ಸರಿಯುತ್ತಾರೆ. ಹೀಗಾಗಿ, ಒಬ್ಬಂಟಿಯಾಗಿ ಈ ಸೇವೆ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಇವರು 2025ರಲ್ಲಿ ಸೇವೆಯಿಂದ ನಿವೃತ್ತಿ ಪಡೆದುಕೊಳ್ಳಲಿದ್ದು, ಈ ಕಾರ್ಯ ಮುಂದುವರೆಸಿಕೊಂಡು ಹೋಗುವುದಾಗಿ ತಿಳಿಸಿದ್ದಾರೆ.