ಕಛ್ (ಗುಜರಾತ್): ಏಷ್ಯಾದ ಮೊದಲ ಡಿಯೋಡರೈಸ್ಡ್ ಒಂಟೆ ಹಾಲು ಸಂಸ್ಕರಣಾ ಘಟಕವು ಗುಜರಾತ್‌ನ ಕಛ್‌ನ ಚಂದ್ರನಿ ಗ್ರಾಮದಲ್ಲಿ ಕಾರ್ಯಾರಂಭಗೊಂಡಿದೆ. ಇದರೊಂದಿಗೆ, ಒಂಟೆ ಸಾಕಾಣಿಕೆದಾರರ ಆದಾಯ ಮತ್ತು ಜೀವನ ಪರಿಸ್ಥಿತಿಗಳು ಸುಧಾರಿಸುತ್ತಿವೆ. ಒಂದೊಮ್ಮೆ ಪ್ರತಿ ಲೀಟರ್ ಒಂಟೆ ಹಾಲಿಗೆ ಕೇವಲ 20 ರೂ.ಗೆ ಸಿಗುತ್ತಿತ್ತು. ಆದರೆ ಇವಾಗ ಲೀಟರ್ ಒಂಟೆ ಹಾಲು 51 ರೂಪಾಯಿಗೆ ಮಾರಾಟವಾಗುತ್ತಿದೆ. ಹೀಗಾಗಿ ಈಗ ಒಂಟೆ ಸಾಕಾಣಿಕೆ ಕೇವಲ ಹವ್ಯಾಸವಾಗಿರದೆ ಜೀವನೋಪಾಯದ ಮೂಲವಾಗಿದೆ.
ಅಮುಲ್ ಕಂಪನಿ ಆರಂಭಿಸಿರುವ ಕಛ್ ಹಾಲು ಘಟಕವು ಒಂಟೆ ಸಾಕಾಣಿಕೆದಾರರಲ್ಲಿ ಜೀವನೋಪಾಯದ ಭರವಸೆ ಹುಟ್ಟಿಸಿದ್ದು, ಒಂಟೆ ಮೇಯಿಸುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಇಡೀ ಪ್ರಪಂಚದಲ್ಲಿ ದುಬೈ ಮತ್ತು ಪಾಕಿಸ್ತಾನಗಳಲ್ಲಿ ಮಾತ್ರ ಒಂಟೆ ಹಾಲು ಸಂಸ್ಕರಿಸುವ ಒಟ್ಟು ಮೂರು ಕೇಂದ್ರಗಳಿವೆ. ಈಗ ಅಲ್ಟ್ರಾ ಮಾಡರ್ನ್ ಸಂಸ್ಕರಣಾ ಯಂತ್ರದೊಂದಿಗೆ ನಾಲ್ಕನೇ ಸಂಸ್ಕರಣಾ ಕೇಂದ್ರವನ್ನು ಕಛ್‌ನ ಅಂಜಾರ್ ತಾಲೂಕಿನ ಚಂದ್ರನಿ ಗ್ರಾಮದಲ್ಲಿ ಪ್ರಾರಂಭಿಸಲಾಗಿದೆ.
ಈ ಬಗ್ಗೆ ಮಾತನಾಡಿದ ಸರ್ಹದ್ ಡೇರಿ ಅಧ್ಯಕ್ಷ ವಾಲಂಜಿಭಾಯಿ ಹೊನಬಲ್, ಪ್ರಸ್ತುತ ಕಛ್ ಜಿಲ್ಲೆಯಲ್ಲಿ ಒಂಟೆ ಹಾಲಿನ ಮಾರುಕಟ್ಟೆ ಉತ್ತಮವಾಗಿದೆ. ಸರ್ಹದ್ ಡೈರಿ, ಅಮುಲ್, ಸಹಜೀವನ್ ಮತ್ತು ಕಛ್ ಉಲ್ಹಕ್ ಮಾಲ್ಧಾರಿ ಸಂಘಟನೆಯ ವ್ಯವಸ್ಥಾಪಕ ಸಂಘಗಳು ಸೇರಿದಂತೆ ಜಿಲ್ಲೆಯ 5 ಸ್ಥಳಗಳಲ್ಲಿ ಒಂಟೆ ಹಾಲು ಸಂಗ್ರಹಿಸಲಾಗುತ್ತಿದೆ. ನಿತ್ಯ 3,500 ರಿಂದ 4,100 ಲೀಟರ್ ಹಾಲು ಸಂಗ್ರಹವಾಗುತ್ತದೆ. ಒಂಟೆಯ ಬೆಲೆ ಈ ಹಿಂದೆ 10,000 ರೂಪಾಯಿ ಇತ್ತು. ಆದರೆ ಈಗ ಒಂಟೆಯೊಂದರ ಬೆಲೆ 35,000 ರೂಪಾಯಿಗಳಿಂದ 40,000 ರೂಪಾಯಿಗಳಾಗಿದೆ. ಇತ್ತೀಚಿನ ದಿನಗಳಲ್ಲಿ ಜಾಮ್‌ನಗರ, ಪಾಟಣ್, ಬನಸ್ಕಾಂತದ ಯುವಕರು ಒಂಟೆಗಳನ್ನು ಖರೀದಿಸಿ ಹೈನುಗಾರಿಕೆ ಆರಂಭಿಸಿದ್ದಾರೆ. ಖನಿಜಾಂಶಗಳಿಂದ ಸಮೃದ್ಧವಾಗಿರುವ ಒಂಟೆ ಹಾಲು ಆರೋಗ್ಯ ಸುಧಾರಿಸಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.