ಚಂಡೀಗಢ/ಅಮೃತಸರ:ಬಿಂದ್ರನ್ವಾಲಾ 2.0 ಎಂದೇ ಕುಖ್ಯಾತಿ ಪಡೆದಿರುವ ಖಲಿಸ್ತಾನಿ ಹೋರಾಟಗಾರ ಅಮೃತ್‌ಪಾಲ್ ಸಿಂಗ್ ಪೊಲೀಸರಿಂದ ತಪ್ಪಿಸಿಕೊಂಡು ಕಣ್ಮರೆಯಾಗಿದ್ದು, ತೀವ್ರ ಶೋಧ ಮುಂದುವರಿದಿದೆ. ಈ ಮಧ್ಯೆ ಅವರ ಪತ್ನಿ ದೇಶಬಿಟ್ಟು ಪರಾರಿಯಾಗುವ ಮುನ್ಸೂಚನೆ ಸಿಕ್ಕ ಬೆನ್ನಲ್ಲೇ ಅವರನ್ನು ಅಮೃತಸರ ವಿಮಾನ ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಮೃತ್‌ಪಾಲ್ ಸಿಂಗ್ ಪರಾರಿಯಾದ ಬಳಿಕ ಪೊಲೀಸರು ಅವರ ಕುಟುಂಬಸ್ಥರು, ಆಪ್ತರ ಮೇಲೆ ನಿಗಾ ವಹಿಸಿದ್ದಾರೆ. ಇಂದು ಅಮೃತ್ ಪತ್ನಿ ಅಮೃತಸರ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಅವರು ಲಂಡನ್ಗೆ ತೆರಳುತ್ತಿದ್ದಾರೆ ಎಂಬ ಮಾಹಿತಿ ಅರಿತ ಪೊಲೀಸರು ತಕ್ಷಣವೇ ಅವರನ್ನು ನಿಲ್ದಾಣದಲ್ಲೇ ವಶಕ್ಕೆ ಪಡೆದಿದ್ದಾರೆ. ಪೊಲೀಸರು ಕೈಗೊಂಡ ಈ ಕ್ರಮದ ನಂತರ, ಶೀಘ್ರದಲ್ಲೇ ಅಮೃತಪಾಲ್ ಸಿಂಗ್ ಕೂಡ ಪೊಲೀಸರಿಗೆ ಶರಣಾಗುವ ಸಾಧ್ಯತೆಯಿದೆ.
ಶರಣಾಗಲಿದ್ದಾರಾ ಅಮೃತ್‌ಪಾಲ್:ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ, ವಾರಿಸ್ ಪಂಜಾಬ್ ಸಂಘಟನೆಯ ಮುಖ್ಯಸ್ಥ ಅಮೃತ್‌ಪಾಲ್ ಸಿಂಗ್ ಮಾರ್ಚ್ 18 ರಿಂದ ಪೊಲೀಸರ ಕಣ್ತಪ್ಪಿಸಿ ತಲೆಮರೆಸಿಕೊಂಡಿದ್ದಾರೆ. ಆತನ ಸಹಚರ ಪಾಪಲ್ಪ್ರೀತ್ ಸಿಂಗ್ ಬಂಧನದ ನಂತರ ಅಮೃತ್‌ಪಾಲ್ ಒತ್ತಡಕ್ಕೆ ಒಳಗಾಗಿದ್ದು, ಪೊಲೀಸರಿಗೆ ಶರಣಾಗಲಿದ್ದಾರೆ ಎಂದು ಹೇಳಲಾಗಿದೆ.
ಮತ್ತೊಂದೆಡೆ, ಪಂಜಾಬ್ ಪೊಲೀಸರು ಅಮೃತ್‌ಪಾಲ್ ಪತ್ತೆಗೆ ನಿರಂತರವಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಇದೇ ಏಪ್ರಿಲ್ 10ರಂದು ದೆಹಲಿ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಆಪ್ತ ಪಾಪಲ್ಪ್ರೀತ್ ಸಿಂಗ್ಗೆ ಬಲೆ ಹಾಕುವಲ್ಲಿ ಯಶಸ್ವಿಯಾಗಿದ್ದರು. ಇದರ ಬೆನ್ನಲ್ಲೇ ಅಮೃತ್‌ಪಾಲ್ ಶರಣಾಗಬಹುದು ಎಂಬ ಮಾಹಿತಿ ಪೊಲೀಸರಿಗೆ ಬಂದಿತ್ತು. ಹರ್ಮಂದಿರ್ ಸಾಹಿಬ್, ದಮ್ದಾಮಾ ಸಾಹಿಬ್ ಅಥವಾ ಆನಂದಪುರ ಸಾಹಿಬ್‌ನಲ್ಲಿ ಅಮೃತ್‌ಪಾಲ್ ಶರಣಾಗತಿ ಆಗಲಿದ್ದಾನೆ ಎನ್ನಲಾಗಿತ್ತು. ಆದರೆ, ಈವರೆಗೂ ಆತನ ಸುಳಿವು ಕೂಡ ಪತ್ತೆಯಾಗಿಲ್ಲ. ಇದೀಗ ಆತನ ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅಮೃತ್‌ಪಾಲ್ ಮುಂದಿನ ನಡೆ ಏನಾಗಲಿದೆ ಎಂಬುದರ ಮೇಲೆ ಎಲ್ಲರ ಕಣ್ಣು ಬಿದ್ದಿದೆ.
ದಾಳಿ ಮಾಡಿದ್ದ ಅಮೃತ್‌ಪಾಲ್;ಖಲಿಸ್ತಾನಿ ಪರ ಒಲವು ಹೊಂದಿರುವ ಅಮೃತ್‌ಪಾಲ್ ಪಂಜಾಬ್ ಸರ್ಕಾರ ಮತ್ತು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದ್ದಾನೆ. ಕಳೆದ ಫೆಬ್ರವರಿಯಲ್ಲಿ ಅಮೃತ್‌ಪಾಲ್ ಸಿಂಗ್ನ ಸಹಾಯಕ ಲವ್‌ಪ್ರೀತ್‌ನನ್ನು ಬಿಡುಗಡೆ ಮಾಡಿಸುವ ನಿಟ್ಟಿನಲ್ಲಿ ಅಜ್ನಾಲ್ ಪೊಲೀಸ್ ಠಾಣೆ ಮೇಲೆ ಬೆಂಬಲಿಗರು ದಾಳಿ ಮಾಡಿದ್ದರು. ಈ ಮೂಲಕ ಅಮೃತ್‌ಪಾಲ್ ತನ್ನ ಪುಂಡಾಟ ಆರಂಭಿಸಿದ್ದ. ಇದರ ಬೆನ್ನಲ್ಲೇ ಪೊಲೀಸರು ಈತನ ಬಂಧನಕ್ಕೆ ಮಾರ್ಚ್ 18ರಂದು ಬೃಹತ್ ಕಾರ್ಯಾಚರಣೆ ಶುರು ಮಾಡಿದ್ದರು. ಅಪಾರ ಸಂಖ್ಯೆಯ ಪೊಲೀಸರ ಕಾರ್ಯಾಚರಣೆ ನಡುವೆಯೂ ಅಮೃತ್‌ಪಾಲ್ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ಅಂದಿನಿಂದಲೂ ಪೊಲೀಸರ ಕೈಗೆ ಸಿಗದೇ ಚಳ್ಳೆಹಣ್ಣು ತಿನ್ನಿಸುತ್ತಾ, ಬೇರೆ - ಬೇರೆ ಸ್ಥಳಗಳಿಗೆ ತನ್ನ ಮೊಕ್ಕಾಂ ಬದಲಾಯಿಸುತ್ತಿದ್ದಾನೆ.
ಪೋಸ್ಟರ್‌ಗಳ ಅಂಟಿಸಿದ ಪೊಲೀಸರು:ಅಜ್ಞಾತವಾಗಿರುವ ಅಮೃತ್ಪಾಲ್ಗಾಗಿ ಪೊಲೀಸರು ಏನೆಲ್ಲಾ ಕಸರತ್ತು ನಡೆಸುತ್ತಿದ್ದಾರೆ. ರಾಜ್ಯದ ಅನೇಕ ರೈಲು ನಿಲ್ದಾಣಗಳಲ್ಲಿ ಪಾಲ್ನ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. ಈತ ವಿವಿಧ ಪ್ರಕರಣಗಳಲ್ಲಿ ಬೇಕಾಗಿದ್ದಾನೆ. ಈತನ ಬಗ್ಗೆ ಯಾರಿಗಾದರೂ ಮಾಹಿತಿ ಸಿಕ್ಕಲ್ಲಿ ಪೊಲೀಸರಿಗೆ ತಿಳಿಸಬೇಕು. ಅಂಥವರಿಗೆ ಸೂಕ್ತ ಬಹುಮಾನ ನೀಡಲಾಗುವುದು ಮತ್ತು ಮಾಹಿತಿದಾರರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ಪೋಸ್ಟರ್‌ಗಳಲ್ಲಿ ಉಲ್ಲೇಖಿಸಲಾಗಿದೆ.
ಓದಿ:ಅಮೃತ್‌ಪಾಲ್ ಸಿಂಗ್ ಸಹಚರ ಪಾಪಲ್ಪ್ರೀತ್ ಸಿಂಗ್ ಬಂಧನ: ಹೋಶಿಯಾರ್ಪುರದಲ್ಲಿ ಬಲೆಗೆ ಕೆಡವಿದ ಪಂಜಾಬ್ ಪೊಲೀಸರು