ಕುರುಕ್ಷೇತ್ರ (ಹರಿಯಾಣ): ಖಲಿಸ್ತಾನ್ ಪ್ರತ್ಯೇಕತಾವಾದಿ ನಾಯಕ, ಪಂಜಾಬ್ ವಾರಿಸ್ ಸಂಘಟನೆಯ ಮುಖ್ಯಸ್ಥ ಅಮೃತಪಾಲ್ ಸಿಂಗ್ ಬಂಧನಕ್ಕಾಗಿ ಪೊಲೀಸರು ಕಳೆದ ಐದು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದರ ನಡುವೆ ನೆರೆಯ ಹರಿಯಾಣದ ಕುರುಕ್ಷೇತ್ರ ಜಿಲ್ಲೆಯಲ್ಲೇ ಅಮೃತ್‌ಪಾಲ್ ಸಿಂಗ್ ತಲೆ ಮರೆಸಿಕೊಂಡು ಕುಳಿತಿದ್ದ ಎಂಬ ಮಾಹಿತಿ ಹೊರ ಬಿದ್ದಿದೆ. ಈ ಸಂಬಂಧ ಮಹಿಳೆಯೊಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ:ಪರಾರಿಯಾಗಲು ಮರ್ಸಿಡಿಸ್ ಬೆಂಜ್, ಎಸ್‌ಯುವಿ ಕಾರು, ಬೈಕ್ ಬಳಸಿದ ಅಮೃತ್‌ಪಾಲ್!
ಇಲ್ಲಿನ ಶಹಬಾದ್ ಪಟ್ಟಣದಲ್ಲಿ ಅಮೃತಪಾಲ್ ನಾಲ್ಕು ದಿನಗಳ ಕಾಲ ತಂಗಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಶಹಬಾದ್ನಲ್ಲಿ ಓರ್ವ ಮಹಿಳೆಯನ್ನು ಹರಿಯಾಣ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಈ ಮಹಿಳೆಯನ್ನು ಪಂಜಾಬ್ ಪೊಲೀಸರಿಗೆ ಒಪ್ಪಿಸಲಾಗಿದೆ. ಇದೇ ವೇಳೆ ಅಮೃತಪಾಲ್ ಯಮುನಾನಗರದ ಮೂಲಕ ಶಹಬಾದ್ ಮೂಲಕ ಉತ್ತರಾಖಂಡಕ್ಕೆ ಪಲಾಯನ ಮಾಡಿರುವ ಶಂಕೆ ಕೂಡ ವ್ಯಕ್ತವಾಗಿದೆ.
ಕೇಂದ್ರ ಏಜೆನ್ಸಿಗಳ ರಹಸ್ಯ ಸಭೆ: ಪಂಜಾಬ್ ಪೊಲೀಸರು ಬೃಹತ್ ಕಾರ್ಯಾಚರಣೆ ಮಧ್ಯೆಯೂ ಅಮೃತಪಾಲ್ ತಲೆ ಮರೆಸಿಕೊಂಡು ಓಡಾಡುತ್ತಿದ್ದಾನೆ. ಇದೀಗ ಹರಿಯಾಣದಲ್ಲೇ ತಂಗಿದ್ದ ಎಂಬ ಮಾಹಿತಿ ಹಾಗೂ ಉತ್ತರಾಖಂಡಕ್ಕೆ ಪಲಾಯನ ಮಾಡಿರುವ ಶಂಕೆ ಬೆನ್ನಲ್ಲೇ ಅಲ್ಲಿನ ಪೊಲೀಸರಿಗೆ ಅರ್ಲಟ್ ಮಾಡಲಾಗಿದೆ. ಇದರೊಂದಿಗೆ ಪಂಜಾಬ್ ರಾಜ್ಯ ಮತ್ತು ಕೇಂದ್ರ ಸಂಸ್ಥೆಗಳು ಪರಸ್ಪರ ಸಮನ್ವಯ ಸಾಧಿಸುವ ಯತ್ನ ನಡೆಯುತ್ತಿದೆ.
ಇದನ್ನೂ ಓದಿ:ಪಂಜಾಬ್‌ನಲ್ಲಿ ಖಲಿಸ್ತಾನ್ ಘೋಷಣೆಯ ಪುನರುತ್ಥಾನ ಅನಾವರಣ..
ಮೂಲಗಳ ಪ್ರಕಾರ, ಅಮೃತಪಾಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ಸಂಸ್ಥೆಗಳು ಪಂಜಾಬ್‌ನ ಗುಪ್ತಚರ ಸಂಸ್ಥೆಗಳೊಂದಿಗೆ ರಹಸ್ಯ ಸಭೆ ನಡೆಸಿವೆ. ಪಂಜಾಬ್‌ನ ತನಿಖಾ ಸಂಸ್ಥೆಗಳು ಅಮೃತಪಾಲ್‌ಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನೂ ಕೇಂದ್ರ ಏಜೆನ್ಸಿಗಳಿಗೆ ಹಸ್ತಾಂತರಿಸಲಾಗಿದೆ. ಅಷ್ಟೇ ಅಲ್ಲ, ಅಮೃತಪಾಲ್ ಅಡಗುತಾಣದಿಂದ ಕೆಲ ಸಾಧನವನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಗಡಿಯಾಚೆಗಿನ ಐಎಸ್‌ಐ ಮುಖ್ಯಸ್ಥರೊಂದಿಗಿನ ಸಂಭಾಷಣೆಯ ರೆಕಾರ್ಡಿಂಗ್ ಕೂಡ ಇದೆ ಎನ್ನಲಾಗುತ್ತಿದೆ. ಸದ್ಯ ಈ ಎಲ್ಲ ದಾಖಲೆಗಳ ಸಿಎಫ್‌ಎಲ್ ತನಿಖೆಯನ್ನೂ ನಡೆಸಲು ಕೇಂದ್ರ ತನಿಖಾ ಸಂಸ್ಥೆಗಳು ಸಿದ್ಧತೆ ನಡೆಸಿವೆ. ಶೀಘ್ರದಲ್ಲೇ ಈ ಪ್ರಕರಣಕ್ಕೆ ಸಂಬಂಧಿಸಿದ ತಾಂತ್ರಿಕ ಸಾಕ್ಷ್ಯಗಳನ್ನು ಹೈದರಾಬಾದ್‌ಗೆ ಹೆಚ್ಚಿನ ತನಿಖೆಗಾಗಿ ರವಾನಿಸುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.
ಎರಡು ಜಿಲ್ಲೆಗಳಲ್ಲಿ ಇಂಟರ್ನೆಟ್ ಸ್ಥಗಿತ:ಪಂಜಾಬ್ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮತ್ತು ಪೊಲೀಸರು ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ. ಗುರುವಾರ ತರ್ನ್ ತರನ್ ಮತ್ತು ಫಿರೋಜ್‌ಪುರ ಜಿಲ್ಲೆಗಳಲ್ಲಿ ನಾಳೆಯವರೆಗೆ ಮೊಬೈಲ್ ಇಂಟರ್ನೆಟ್ ಮತ್ತು ಎಸ್‌ಎಂಎಸ್ ಸೇವೆಗಳನ್ನು ಸ್ಥಗಿತಗೊಳಿಸಿ ಆದೇಶಿಸಲಾಗಿದೆ. ಸಾರ್ವಜನಿಕ ಸುರಕ್ಷತೆಯ ಹಿತದೃಷ್ಟಿಯಿಂದ ಮತ್ತು ಯಾವುದೇ ಹಿಂಸಾಚಾರಕ್ಕೆ ಪ್ರಚೋದನೆಯನ್ನು ತಡೆಗಟ್ಟಲು ಹಾಗೂ ಶಾಂತಿ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಯಾವುದೇ ಭಂಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳ ಮೇಲಿನ ನಿರ್ಬಂಧ ವಿಸ್ತರಿಸಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ:ಖಲಿಸ್ತಾನ್ ಪರ ನಾಯಕ ಅಮೃತಪಾಲ್ ಸಿಂಗ್ ಪರಾರಿ: ಪಂಜಾಬ್ ಪೊಲೀಸರ ಪ್ರಕಟಣೆ