ಹೋಶಿಯಾರ್‌ಪುರ (ಪಂಜಾಬ್): ಕಣ್ತಪ್ಪಿಸಿಕೊಂಡು ಓಡಾಡುತ್ತಿರುವ ಖಲಿಸ್ತಾನ್ ಪ್ರತ್ಯೇಕತಾವಾದಿ ಅಮೃತಪಾಲ್ ಸಿಂಗ್ ಹುಡುಕಾಟದ ಕಾರ್ಯಾಚರಣೆ ಇನ್ನಷ್ಟು ಬಿಗಿಗೊಳಿಸಿರುವ ಪಂಜಾಬ್ ಪೊಲೀಸರು ಸೋಮವಾರ ಆತನ ಆಪ್ತ ಸಹಾಯಕ ಪಾಪಲ್‌ಪ್ರೀತ್ ಸಿಂಗ್ನನ್ನು ಬಂಧಿಸಿದ್ದಾರೆ. ಹೋಶಿಯಾರ್‌ಪುರದಲ್ಲಿ ಪಂಜಾಬ್ ಪೊಲೀಸ್ ಕೌಂಟರ್ ಇಂಟೆಲಿಜೆನ್ಸ್ ಘಟಕ ಪಾಪಲ್ಪ್ರೀತ್ನನ್ನು ಬಂಧಿಸಿದೆ ಎಂದು ಪೊಲೀಸ್ ಇಲಾಖೆಯ ಮೂಲಗಳು ಬಹಿರಂಗಪಡಿಸಿವೆ.
ಪಂಜಾಬ್ ಪೊಲೀಸ್ ಹಾಗೂ ದೆಹಲಿ ಪೊಲೀಸರ ವಿಶೇಷ ಘಟಕದ ಜಂಟಿ ಕಾರ್ಯಾಚರಣೆ ನಡೆಸಿ, ಅಮೃತಪಾಲ್ ಸಿಂಗ್ ಅವರ ಆಮೂಲಾಗ್ರ ಚಟುವಟಿಕೆಗಳ ಹಿಂದಿನ ಮೈಂಡ್ ಎಂದು ನಂಬಲಾದ ಪಾಪಲ್‌ಪ್ರೀತ್ ಸಿಂಗ್ ನನ್ನು ಬಂಧಿಸಿದೆ. ಸದ್ಯ ಪಾಪಲ್‌ಪ್ರೀತ್ ಸಿಂಗ್ ಅಮೃತಸರ ಗ್ರಾಮಾಂತರ ಪೊಲೀಸರ ವಶದಲ್ಲಿದ್ದಾನೆ. ಪೊಲೀಸರ ಪ್ರಕಾರ, ಅಮೃತಪಾಲ್ ಮತ್ತು ಪಾಪಲ್‌ಪ್ರೀತ್ ಇಬ್ಬರೂ ಜಲಂಧರ್‌ನಲ್ಲಿ ಇನ್ನೇನು ಪೊಲೀಸರ ಕೈಗೆ ಸಿಕ್ಕಿಹಾಕಿಕೊಳ್ಳುತ್ತಾರೆ ಎನ್ನುವಷ್ಟರಲ್ಲಿ ಇಬ್ಬರೂ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಹೋಶಿಯಾರ್ಪುರಕ್ಕೆ ತಲುಪುತ್ತಲೇ ಇಬ್ಬರೂ ಬೇರೆ ಬೇರೆ ದಾರಿಯನ್ನು ಹಿಡಿದು ತಪ್ಪಿಸಿಕೊಂಡಿದ್ದರು.
ಪಾಕಿಸ್ತಾನದ ಐಎಸ್ಐ ಜೊತೆ ಸಂಪರ್ಕ ಹೊಂದಿರುವ ಆರೋಪವಿರುವ ಪಾಪಲ್‌ಪ್ರೀತ್ ಸಿಂಗ್ ಫೆಬ್ರವರಿ 23 ರಂದು ನಡೆದ ಅಜ್ನಾಲಾ ಹಿಂಸಾಚಾರ ಪ್ರಕರಣದಲ್ಲೂ ಪೊಲೀಸರಿಗೆ ಬೇಕಾಗಿರುವ ಆರೋಪಿಯಾಗಿದ್ದಾನೆ. ರೈತರ ಕುಟುಂಬದಲ್ಲಿ ಹುಟ್ಟಿರುವ ಪಾಪಲ್‌ಪ್ರೀತ್ ಸಿಂಗ್ ಕಾನ್ವೆಂಟ್ ಶಾಲೆಯಲ್ಲಿ ಶಿಕ್ಷಣ ಮುಗಿಸಿ, ಪಿಜಿ ಡಿಪ್ಲೋಮಾ ಪೂರ್ಣಗೊಳಿಸಿದ್ದಾನೆ. 20ನೇ ವಯಸ್ಸಿಗೆ ಸಿಖ್ ಯೂತ್ ಫ್ರಂಟ್ನ ಕಾರ್ಯಕರ್ತನಾಗಿ ಸೇರಿಕೊಂಡನು. ಇಲ್ಲಿ ಈತ ಸಂಘಟನೆಯ ಹಿಂದಿನ ಪ್ರೇರಕ ಶಕ್ತಿಯಾಗಿ ಬೆಳೆದನು. ಪಾಪಲ್‌ಪ್ರೀತ್ ಸಿಂಗ್ 1990ರ ದಶಕದ ಆರಂಭದಿಂದಲೂ ಜೈಲಿನಲ್ಲಿದ್ದ ಸಿಖ್ ಕೈದಿಗಳ ಬಿಡುಗಡೆಗಾಗಿ ಆಂದೋಲನ ನಡೆಸಿದ ಸಿಖ್ ಯೂತ್ ಫೆಡರೇಶನ್ ಭಿಂದ್ರವಾಲಾದೊಂದಿಗೆ ಸಹ ಕೈ ಜೋಡಿಸಿದ್ದನು.
2015ರಲ್ಲಿ, ಆಯೋಜಿಸಿದ್ದ ಸರ್ಬತ್ ಖಾಲ್ಸಾದಲ್ಲಿ ಆಗಿನ ಪ್ರಕಾಶ್ ಸಿಂಗ್ ಬಾದಲ್ ಸರ್ಕಾರದ ವಿರುದ್ಧ ಜೈಲಿನಲ್ಲಿರುವ ಉಗ್ರಗಾಮಿ ನರೇನ್ ಸಿಂಗ್ ಚೌರಾ ಅವರ 'ಚಾರ್ಜ್ ಶೀಟ್' ಅನ್ನು ಓದಿ ಪಾಪಲ್‌ಪ್ರೀತ್ ಪ್ರಾಮುಖ್ಯತೆ ಪಡೆದನು. ಸರ್ಬತ್ ಖಾಲ್ಸಾವನ್ನು ಆ ವರ್ಷದ ಆರಂಭದಲ್ಲಾದ ಹತ್ಯೆ ಪ್ರಕರಣಗಳು ಮತ್ತು ಹತ್ಯೆ ಘಟನೆಗಳ ವಿರುದ್ಧದ ಪ್ರತಿಭಟನೆಯಲ್ಲಿ ಪೊಲೀಸರು ಇಬ್ಬರು ಸಿಖ್ ಯುವಕರನ್ನು ಕೊಂದ ಬಗ್ಗೆ ಆಕ್ರೋಶ ವ್ಯಕ್ತಪಡಿಸಲು ಆಯೋಜಿಸಲಾಗಿತ್ತು. ತನ್ನ ಭಾಷಣದ ಕೊನೆಯಲ್ಲಿ ಪಾಪಲ್‌ಪ್ರೀತ್ ಸಿಂಗ್ ಕೂಡ "ಖಲಿಸ್ತಾನವೊಂದೇ ಪರಿಹಾರ" ಎಂದು ಹೇಳಿದ್ದನು. ನ್ಯಾಯಮೂರ್ತಿ ಮೆಹ್ತಾಬ್ ಸಿಂಗ್ ಗಿಲ್ ಆಯೋಗದ ಶಿಫಾರಸುಗಳ ನಂತರ 2018 ರಲ್ಲಿ ಈ ಪ್ರಕರಣ ಕೈಬಿಡಲಾಗಿತ್ತು.