ಚಂಡೀಗಢ/ಜಲಂಧರ್:ಬಂಧನ ಭೀತಿಯಿಂದಾಗಿ ತಪ್ಪಿಸಿಕೊಂಡು ಓಡಾಡುತ್ತಿರುವ ಖಲಿಸ್ತಾನ್ ಪ್ರತ್ಯೇಕತಾವಾದಿ ಅಮೃತ್‌ಪಾಲ್ ಸಿಂಗ್ ಪೊಲೀಸರು ಕಣ್ತಪ್ಪಿಸಲು ಕಾರು, ಬೈಕ್, ಬಟ್ಟೆ ಬದಲಿಸಿಕೊಂಡಿರುವ ದೃಶ್ಯಗಳು ಸಿಸಿಟಿವಿಗಳಲ್ಲಿ ಸೆರೆಯಾಗಿವೆ. ಇವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ನಾಲ್ಕು ದಿನಗಳಿಂದ ತೀವ್ರ ಶೋಧ ನಡೆಸುತ್ತಿರುವ ಪೊಲೀಸರಿಗೆ ಅಮೃತ್‌ಪಾಲ್ ಚಳ್ಳೆಹಣ್ಣು ತಿನ್ನಿಸಿದ್ದಾನೆ. ಇನ್ನೊಂದೆಡೆ ಅಮೃತ್‌ಪಾಲ್ ಪರಾರಿಯನ್ನು ಹೈಕೋರ್ಟ್ ಟೀಕಿಸಿದ್ದು, "ಇದು ಪೊಲೀಸ್ ವ್ಯವಸ್ಥೆಯ ವೈಫಲ್ಯ" ಎಂದು ಅಸಮಾಧಾನ ವ್ಯಕ್ತಪಡಿಸಿದೆ.
"ವಾರಿಸ್ ಪಂಜಾಬ್ ದಿ" ಸಂಘಟನೆಯ ಮುಖ್ಯಸ್ಥ ಅಮೃತ್‌ಪಾಲ್ ಸಿಂಗ್, ಪೊಲೀಸರ ಕಣ್ಗಾವಲು ಮೀರಿ ಓಡಾಡುತ್ತಿದ್ದಾನೆ. ಸಹಚರರ ನೆರವಿನಿಂದ ಆತ ಹಲವು ಹಳ್ಳಿಗಳಲ್ಲಿ ತಲೆಮರೆಸಿಕೊಂಡಿದ್ದಾನೆ. ಇದಕ್ಕಾಗಿ ಕಾರು, ಬೈಕ್ ಅನ್ನು ಆತ ಬಳಸಿಕೊಂಡಿದ್ದಾನೆ. ಶೀಘ್ರದಲ್ಲೇ ಆತನನ್ನು ಬಂಧಿಸಲಾಗುವುದು. ಇದಕ್ಕಾಗಿ ಬೇರೆ ರಾಜ್ಯಗಳು ಮತ್ತು ಕೇಂದ್ರದ ನೆರವು ಕೋರಿದ್ದೇವೆ ಎಂದು ಪಂಜಾಬ್ ಪೊಲೀಸರು ತಿಳಿಸಿದರು.
ಕಾರಿನಲ್ಲಿ ಪರಾರಿ ದೃಶ್ಯ ಸೆರೆ:ಪ್ರಾಥಮಿಕ ತನಿಖೆಯ ಪ್ರಕಾರ, ಅಮೃತ್‌ಪಾಲ್ ಜಲಂಧರ್ ಜಿಲ್ಲೆಯ ಗುರುದ್ವಾರಕ್ಕೆ ಭೇಟಿ ನೀಡಿದ್ದಾನೆ. ಇಲ್ಲಿ ಬಟ್ಟೆ ಬದಲಿಸಿಕೊಂಡ ನಂತರ ಬೈಕ್ನಲ್ಲಿ ಪರಾರಿಯಾಗಿದ್ದಾನೆ. ಇದಕ್ಕೂ ಮೊದಲು ಆತ ತನ್ನ ಸಾಂಪ್ರದಾಯಿಕ ಬಟ್ಟೆ ಕಳಚಿ ಮರ್ಸಿಡಿಸ್ ಬೆಂಜ್ನಲ್ಲಿ ಪರಾರಿಯಾಗುತ್ತಿರುವ ದೃಶ್ಯ ಟೋಲ್ವೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದಾದ ಬಳಿಕ ಎಸ್‌ಯುವಿ ಕಾರಿನಲ್ಲೂ ಪತ್ತೆಯಾಗಿದ್ದಾನೆ. ಪ್ಯಾಂಟ್, ಶರ್ಟ್ ಧರಿಸಿ ಆತ ಓಡಾಡುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪಾಲ್ ಪರಾರಿಯಾಗಲು ಆತನ ಸಹಚರರು ನೆರವು ನೀಡಿದ್ದಾನೆ. ಮೊದಲ ದಿನ ಪೊಲೀಸ್ ಬಂಧನದಿಂದ ತಪ್ಪಿಸಿಕೊಂಡು ನಂಗಲ್ ಅಂಬಿಯಾನ್ ಹಳ್ಳಿಗೆ ಬಂದಿದ್ದಾನೆ. ಇಲ್ಲಿನ ಗುರುದ್ವಾರದಲ್ಲಿ ಬಟ್ಟೆ ಬದಲಿಸಿಕೊಂಡು, ಊಟ ಮಾಡಿದ್ದಾನೆ. ಈ ಬಗ್ಗೆ ಹಳ್ಳಿಯ ಜನರೇ ಮಾಹಿತಿ ನೀಡಿದ್ದಾರೆ. ಗುರುದ್ವಾರದ ಬಾಬಾರನ್ನು ವಿಚಾರಣೆ ಮಾಡಲಾಗಿದೆ. ನೆರವು ನೀಡಿದ ಸಹಚರರನ್ನು ವಶಕ್ಕೆ ಪಡೆಯಲಾಗಿದೆ. ಈವರೆಗೆ ಒಟ್ಟು 154 ಮಂದಿಯನ್ನು ಬಂಧಿಸಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.