ಅಮ್ರೋಹ (ಉತ್ತರ ಪ್ರದೇಶ): ಸರ್ಕಾರಿ ಕಾರ್ಯಕ್ರಮದಲ್ಲಿ ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಸಂಸದ ಕುನ್ವರ್ ಡ್ಯಾನಿಶ್ ಅಲಿ ಹಾಗೂ ವಿಧಾನ ಪರಿಷತ್ ಬಿಜೆಪಿ ಸದಸ್ಯ ಹರಿಸಿಂಗ್ ಧಿಲ್ಲೋನ್ ನಡುವೆ ಪರಸ್ಪರ ವಾಗ್ವಾದ ನಡೆದ ಘಟನೆ ಉತ್ತರ ಪ್ರದೇಶದ ಅಮ್ರೋಹದಲ್ಲಿ ಇಂದು ನಡೆದಿದೆ.
ಇಂದು ದೇಶಾದ್ಯಂತ ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ 508 ರೈಲ್ವೆ ನಿಲ್ದಾಣಗಳ ನವೀಕರಣ ಕಾರ್ಯಕ್ಕೆ ಪ್ರಧಾನಿ ಮೋದಿ ವರ್ಚುವಲ್ ಮೂಲಕ ಚಾಲನೆ ನೀಡಿದರು. ಅಮ್ರೋಹ ರೈಲ್ವೆ ನಿಲ್ದಾಣದಲ್ಲೂ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಮ್ರೋಹ ಕ್ಷೇತ್ರದ ಸಂಸದ ಡ್ಯಾನಿಶ್ ಅಲಿ ಹಾಗೂ ಇತರ ಜನಪ್ರತಿನಿಧಿಗಳೂ ಸಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ, ಘೋಷಣೆಗಳ ವಿಷಯವಾಗಿ ಡ್ಯಾನಿಶ್ ಅಲಿ ಹಾಗೂ ಬಿಜೆಪಿ ಎಂಎಲ್ಸಿ ಹರಿಸಿಂಗ್ ಧಿಲ್ಲೋನ್ ಮಧ್ಯೆ ಮಾತಿನ ಚಕಮಕಿ ಉಂಟಾಯಿತು.
ಇತರ ಮುಖಂಡರು ಸಮಾಧಾನಪಡಿಸಲು ಯತ್ನಿಸಿದರು. ಆದರೆ, ವೇದಿಕೆ ಮೇಲೆಯೇ ಇಬ್ಬರು ನಾಯಕರು ಪರಸ್ಪರ ತೀವ್ರ ವಾಗ್ವಾದ ನಡೆಸಿದ ಪರಿಣಾಮ ಗದ್ದಲದ ವಾತಾವರಣ ನಿರ್ಮಾಣವಾಯಿತು. ಬಿಜೆಪಿ ಕಾರ್ಯಕರ್ತರು ಭಾರತ್ ಮಾತಾ ಕೀ ಜೈ ಹಾಗೂ ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಲಾರಂಭಿಸಿದರು. ಸ್ವಲ್ಪ ಸಮಯದ ಬಳಿಕ ರೈಲ್ವೇ ಅಧಿಕಾರಿಗಳು ಹಾಗೂ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಬಿಎಸ್ಪಿ ಸಂಸದ ಹಾಗೂ ಬಿಜೆಪಿ ಎಂಎಲ್ಸಿಯ ವಾಗ್ವಾದದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಾಮಾಜಿಕ ಜಾಲತಾಣದಲ್ಲೂ ಇದರ ವಿಡಿಯೋ ಹರಿದಾಡುತ್ತಿದೆ.