ನವದೆಹಲಿ: 'ನವದೆಹಲಿ ಘೋಷಣೆ'ಯಲ್ಲಿ ಅಭೂತಪೂರ್ವ ಒಮ್ಮತ ಸಾಧಿಸಲು ಜಿ20 ರಾಷ್ಟ್ರಗಳಿಗೆ ಕುಶಲತೆಯಿಂದ ದಾರಿ ಮಾಡಿಕೊಟ್ಟ ವ್ಯಕ್ತಿ ಭಾರತದ ನಿಯೋಗದ ಮುಖ್ಯಸ್ಥ (ಶೆರ್ಪಾ-ಪ್ರತಿನಿಧಿ) ಅಮಿತಾಭ್ ಕಾಂತ್. ಇವರು ಇಡೀ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಚರ್ಚೆಗಳಿಂದ ಹಿಡಿದು ವ್ಯವಸ್ಥೆಗಳವರೆಗಿನ ಇವರ ಕಾರ್ಯವೈಖರಿ ಪ್ರಧಾನ ಮಂತ್ರಿ ಮಾತ್ರವಲ್ಲದೇ ವಿರೋಧ ಪಕ್ಷದ ನಾಯಕರಿಂದಲೂ ಮೆಚ್ಚುಗೆ ಪಡೆದಿದೆ.
'ಭಾರತಕ್ಕೆ ಮಹತ್ವದ ವಿಜಯ': ರಾಜತಾಂತ್ರಿಕ ಸಾಧನೆಗೆ ಮತ್ತು ದೃಢವಾದ ಐತಿಹಾಸಿಕ ಘೋಷಣೆಯಲ್ಲಿ ಭಾರತದ ಜಿ20 ಶೆರ್ಪಾ ಅಮಿತಾಭ್ ಕಾಂತ್ ಅವರು ಅಸಾಮಾನ್ಯ ಸಾಧನೆ ತೋರಿದ್ದಾರೆ. ಬರೋಬ್ಬರಿ 200 ಗಂಟೆಗಳ ನಿರಂತರ ಮಾತುಕತೆ, 300 ದ್ವಿಪಕ್ಷೀಯ ಸಭೆಗಳು ಮತ್ತು 15 ಕರಡುಗಳ ನಂತರ ಇದನ್ನು(ನವದೆಹಲಿ ಘೋಷಣೆ) ಸಿದ್ಧಪಡಿಸಲಾಗಿದೆ. ಬಳಿಕ ಪೂರ್ಣ ಪಠ್ಯಕ್ಕೆ ಶೇ.100ರಷ್ಟು ಒಮ್ಮತ ಸಿಕ್ಕಿದೆ. ಕಾಂತ್ ಅವರ ಕಾರ್ಯತಂತ್ರದ ನಾಯಕತ್ವಕ್ಕೆ ಸಾಕ್ಷಿಯಾಗಿರುವ 'ನವದೆಹಲಿ ಘೋಷಣೆ'ಯನ್ನು ಇದೀಗ ಅಂತರರಾಷ್ಟ್ರೀಯ ವೇದಿಕೆಯಲ್ಲಿ 'ಭಾರತಕ್ಕೆ ಮಹತ್ವದ ವಿಜಯ'ವೆಂದು ಆಚರಿಸಲಾಗುತ್ತದೆ.
ಅಮಿತಾಭ್ ಕಾಂತ್ ಅವರು ಈ ಘೋಷಣೆಯನ್ನು ಐತಿಹಾಸಿಕ ಎಂದು ಕರೆದಿದ್ದಾರೆ. ಎಲ್ಲಾ ಅಭಿವೃದ್ಧಿ ಮತ್ತು ಭೌಗೋಳಿಕ ರಾಜಕೀಯ ವಿಷಯಗಳಲ್ಲಿ ಶೇ.100 ಒಮ್ಮತವಿದೆ. ರಷ್ಯಾ ಉಕ್ರೇನ್ ಸಂಘರ್ಷದ ಹಿನ್ನೆಲೆ ಭೌಗೋಳಿಕ ರಾಜಕೀಯದ ಉಲ್ಲೇಖವು ವಿಶೇಷವಾಗಿ ಮುಖ್ಯವಾಗಿದೆ ಎಂದು ಅವರು ಹೇಳಿದ್ದಾರೆ.
ಅಮಿತಾಭ್ ಕಾಂತ್ ಅವರು ಕಳೆದ ವರ್ಷ ಜುಲೈನಲ್ಲಿ ಭಾರತದ ನಿಯೋಗದ ಮುಖ್ಯಸ್ಥ (ಶೆರ್ಪಾ-ಪ್ರತಿನಿಧಿ) ಸ್ಥಾನವನ್ನು ವಹಿಸಿಕೊಂಡರು. ಅಂದರೆ ಭಾರತ ಜಿ 20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳುವ ಹಲವು ತಿಂಗಳುಗಳ ಮೊದಲು. ಜಿ20 ಸೆಕ್ರೆಟರಿಯೇಟ್ ಇರುವ ಸುಷ್ಮಾ ಸ್ವರಾಜ್ ಭವನಕ್ಕೆ ಕಾಂತ್ ತೆರಳಿದಾಗ ಅದು ನಿರ್ಜನ ಸ್ಥಳವಾಗಿತ್ತು. ರಾಜತಾಂತ್ರಿಕ ಕಾರ್ಯಕ್ರಮಕ್ಕೆ ತಯಾರಾಗಲು ವಿವಿಧ ಪಾಲುದಾರರನ್ನು ತೊಡಗಿಸಿಕೊಳ್ಳುವಾಗ ಅಧಿಕಾರಿಗಳು, ಸಲಹೆಗಾರರು ಮತ್ತು ಕಾರ್ಯತಂತ್ರ ತಜ್ಞರ ತಂಡವನ್ನು ಒಟ್ಟುಗೂಡಿಸುವುದು ಅವರ ತಕ್ಷಣದ ದೇಶೀಯ ಕಾರ್ಯವಾಗಿತ್ತು.
ಜಿ20 ನಾಯಕರ ಶೃಂಗಸಭೆ 2022ರಲ್ಲಿ ಜಾಗತಿಕ ವೇದಿಕೆಯಲ್ಲಿ ಅವರು ಉಕ್ರೇನ್‌ನ ರಷ್ಯಾದ ಆಕ್ರಮಣದ ನಂತರ ಧ್ರುವೀಕೃತ ಜಗತ್ತಿನಲ್ಲಿ ಭಾರತದ ಹಿತಾಸಕ್ತಿಗಳನ್ನು ಪ್ರಸುತ್ತಪಡಿಸಬೇಕಾಗಿತ್ತು. ಇಂಡೋನೇಷ್ಯಾದ ಅಧ್ಯಕ್ಷತೆಯಲ್ಲಿ ನಡೆದ ಜಿ20 ಬಾಲಿ ಘೋಷಣೆಯನ್ನು (ನವೆಂಬರ್ 15-16, 2022) ರೂಪಿಸುವಲ್ಲಿ ಸದಸ್ಯ ರಾಷ್ಟ್ರಗಳ ಶೆರ್ಪಾಗಳ ನಡುವೆ ಒಮ್ಮತದ ಅಭಿಪ್ರಾಯ ರೂಪಿಸುವಲ್ಲಿ ಕಾಂತ್ ಪ್ರಮುಖ ಪಾತ್ರ ವಹಿಸಿದ್ದಾರೆ. 'ಶಾಂತಿ ಯುಗ'ಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ಕರೆಯನ್ನು ಅವರು ಪ್ರತಿಧ್ವನಿಸಿದ್ದರು.
ಕಾರ್ಯತಂತ್ರದ ನಾಯಕತ್ವಕ್ಕೆ ಸಾಕ್ಷಿ: ನವದೆಹಲಿ ಘೋಷಣೆಯು ಕಾಂತ್ ಅವರ ಕಾರ್ಯತಂತ್ರದ ನಾಯಕತ್ವಕ್ಕೆ ಸಾಕ್ಷಿಯಾಗಿದೆ. ಜಾಗತಿಕ ವೇದಿಕೆಯಲ್ಲಿ ಭಾರತದ ಪಾತ್ರಕ್ಕಾಗಿ ಅವರ ದೃಷ್ಟಿಕೋನವನ್ನು ಸಾಕಾರಗೊಳಿಸಿದೆ. ಜಿ20 ನಾಯಕರು ಸರ್ವಾನುಮತದಿಂದ ಅಂಗೀಕರಿಸಿದ ಘೋಷಣೆಯು ಹವಾಮಾನ ಬದಲಾವಣೆ, ಸಾಂಕ್ರಾಮಿಕದ ವಿರುದ್ಧ ಸನ್ನದ್ಧತೆ ಮತ್ತು ಆರ್ಥಿಕ ಚೇತರಿಕೆ ಸೇರಿದಂತೆ ಪ್ರಮುಖ ಜಾಗತಿಕ ಸವಾಲುಗಳನ್ನು ಪರಿಹರಿಸುವ ಸಮಗ್ರ ಮತ್ತು ಮುನ್ನೋಟ ಒಳಗೊಂಡ ದಾಖಲೆಯಾಗಿದೆ. ಇದು ಬಹುಪಕ್ಷೀಯತೆಗೆ ಭಾರತದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಮತ್ತು ಅಂತರರಾಷ್ಟ್ರೀಯ ಸಹಕಾರವನ್ನು ಬೆಳೆಸುವಲ್ಲಿ ಅದರ ಸಮರ್ಪಣೆಯನ್ನು ವಿವರಿಸುತ್ತದೆ.
ಯಶಸ್ವಿ ಒಮ್ಮತ ಮೂಡಿಸುವ ಪ್ರಯತ್ನವನ್ನು ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ತಂಡಕ್ಕೆ ಮೆಚ್ಚುಗೆಯ ಸುರಿಮಳೆಗೈದರು. "ನನಗೆ ಒಳ್ಳೆಯ ಸುದ್ದಿ ಬಂದಿದೆ. ನಮ್ಮ ತಂಡದ ಕಠಿಣ ಪರಿಶ್ರಮದಿಂದಾಗಿ, ನವದೆಹಲಿ ಜಿ20 ನಾಯಕರ ಶೃಂಗಸಭೆಯಲ್ಲಿ ಒಮ್ಮತದ ಘೋಷಣೆ ಮಾಡಲಾಗಿದೆ. ಈ ನಾಯಕತ್ವದ ಘೋಷಣೆಯನ್ನು ಅಳವಡಿಸಿಕೊಳ್ಳುವುದು ನನ್ನ ಪ್ರಸ್ತಾವನೆ. ಈ ಘೋಷಣೆಯನ್ನು ಅಳವಡಿಸಿಕೊಳ್ಳುವುದಾಗಿ ಘೋಷಿಸುತ್ತೇನೆ. ಇದಕ್ಕಾಗಿ ಶ್ರಮಿಸಿದ ಮತ್ತು ಅದನ್ನು ಸಾಧ್ಯವಾಗಿಸಿದ ನನ್ನ ಶೆರ್ಪಾ, ಮಂತ್ರಿಗಳನ್ನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ"-ಪ್ರಧಾನಿ ನರೇಂದ್ರ ಮೋದಿ.
ಅಮಿತಾಬ್ ಕಾಂತ್ ಕುರಿತು ಒಂದಿಷ್ಟು..:ಮಾರ್ಚ್ 1, 1956 ರಂದು ಜನಿಸಿದ ಕಾಂತ್ ಅವರ ಶೈಕ್ಷಣಿಕ ಹಿನ್ನೆಲೆ ಸಾರ್ವಜನಿಕ ಸೇವೆಯಲ್ಲಿ ವಿಶಿಷ್ಟವಾದ ವೃತ್ತಿಜೀವನಕ್ಕೆ ಅಡಿಪಾಯ ಹಾಕಿತು. ಅವರು ದೆಹಲಿಯ ಮಾಡರ್ನ್ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡಿದರು. ಬಳಿಕ ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಿಂದ ಅರ್ಥಶಾಸ್ತ್ರದಲ್ಲಿ (ಆನರ್ಸ್) ಪದವಿ ಪಡೆದರು. ನಂತರ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಿಂದ 'ಅಂತರರಾಷ್ಟ್ರೀಯ ಸಂಬಂಧ' ವಿಷಯದಲ್ಲಿ ಎಂಎ ಪದವಿ ಜೊತೆಗೆ ತಮ್ಮ ಶೈಕ್ಷಣಿಕ ಅನ್ವೇಷಣೆಗಳನ್ನು ಮುಂದುವರೆಸಿದರು.
ಅಮಿತಾಬ್ ಕಾಂತ್ 1980ರ ಬ್ಯಾಚ್‌ನ ಕೇರಳ ಕೇಡರ್‌ನ ಐಎಎಸ್ ಅಧಿಕಾರಿ. ಅಲ್ಲಿ ಅವರು ತಲಸ್ಸೆರಿಯ ಸಬ್-ಕಲೆಕ್ಟರ್ ಆಗಿ ಸೇವೆ ಸಲ್ಲಿಸಿದರು. ಅಸಾಧಾರಣ ಆಡಳಿತಾತ್ಮಕ ಕುಶಾಗ್ರಮತಿ ಅವರಿಗೆ ಶೀಘ್ರವಾಗಿ ಜನಮನ್ನಣೆಯನ್ನು ತಂದುಕೊಟ್ಟಿತು. 2019ರ ಇಂಡಿಯಾ ಟುಡೆಯ ಹೈ & ಮೈಟಿ ಶ್ರೇಯಾಂಕಗಳಲ್ಲಿ ಕಾಂತ್ ಅವರು ಭಾರತದ ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳಲ್ಲಿ ಒಬ್ಬರಾಗಿ ಗುರುತಿಸಲ್ಪಟ್ಟರು. ಪ್ರಸ್ತುತ, ಜಿ 20ಯಲ್ಲಿ ಭಾರತದ ರಾಯಭಾರಿ ಎಂಬ ಪ್ರತಿಷ್ಠಿತ ಸ್ಥಾನವನ್ನು ಕಾಂತ್ ಹೊಂದಿದ್ದಾರೆ. ಕಾಂತ್ ಅವರ ರಾಜತಾಂತ್ರಿಕ ಪ್ರಯತ್ನಗಳ ಅತ್ಯಂತ ಗಮನಾರ್ಹ ಅಂಶವೆಂದರೆ ಉಕ್ರೇನ್ ಯುದ್ಧದ ಬಗ್ಗೆ ಬಣದ ನಿಲುವಿನ ಬಗ್ಗೆ ಜಿ20 ನಾಯಕರಿಂದ ಜಂಟಿ ಸಂವಹನದ ಕುರಿತು ಒಮ್ಮತವನ್ನು ಪಡೆಯಲು ಜಾಗತಿಕ ದೈತ್ಯರಾದ ಚೀನಾ ಮತ್ತು ರಷ್ಯಾದೊಂದಿಗೆ ಅವರ ಮಾತುಕತೆಯಾಗಿದೆ.
ಕಾಂಗ್ರೆಸ್ ನಾಯಕ ಶಶಿ ತರೂರ್, ಕಾಂತ್ ಅವರ ರಾಜತಾಂತ್ರಿಕ ಸಾಧನೆಯನ್ನು ಶ್ಲಾಘಿಸಿದ್ದಾರೆ. ದೆಹಲಿ ಘೋಷಣೆಯ ಒಮ್ಮತ ಜಿ20ಯಲ್ಲಿ ಭಾರತಕ್ಕೆ "ಹೆಮ್ಮೆಯ ಕ್ಷಣ" ಎಂದು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ:ಜಿ20: 200 ಗಂಟೆಗಳ ನಿರಂತರ ಮಾತುಕತೆ, 300 ದ್ವಿಪಕ್ಷೀಯ ಸಭೆಗಳ ಫಲವೇ ಐತಿಹಾಸಿಕ ನವದೆಹಲಿ ಘೋಷಣೆ!