ನವದೆಹಲಿ: ವಿಶ್ವದ ಗಮನ ಸೆಳೆದಿರುವ ಭಾರತದಲ್ಲಿ ನಾಳೆಯಿಂದ ಮಹತ್ವದ ಜಿ-20 ಶೃಂಗಸಭೆ ನಡೆಯಲಿದೆ. ಬಹು ನಿರೀಕ್ಷಿತ ಜಿ 20 ಶೃಂಗಸಭೆಗೆ ಮುನ್ನ, ಭಾರತದ ಜಿ 20 ಆತಿಥ್ಯ ವಹಿಸಿರುವ ಭಾರತ ಪರವಾಗಿ ನೀತಿ ಆಯೋಗದ ಅಧ್ಯಕ್ಷ ಅಮಿತಾಭ್ ಕಾಂತ್ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಲಾಯಿತು. ಶೃಂಗಸಭೆ ಮುಕ್ತಾಯದ ಬಳಿಕ ನಡೆಯಲಿರುವ ಘೋಷಣೆಗಳ ಬಗ್ಗೆ ಈ ನಾಯಕರು ವಿವರಣೆ ನೀಡಿದರು. ಶೃಂಗಸಭೆಯ ಅಂತ್ಯದಲ್ಲಿ ಮಹತ್ವದ ನವದೆಹಲಿ ಘೋಷಣೆಗಳು ಹೊರ ಬೀಳಲಿವೆ ಎಂದರು. ಈ ಘೋಷಣೆಗಳು ದಕ್ಷಿಣ ಏಷ್ಯಾದ ಧ್ವನಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು,
ವಿಶ್ವದ ಆರ್ಥಿಕ ಅಭಿವೃದ್ಧಿಯ ವೇಗವನ್ನು ಹೆಚ್ಚಿಸುವುದು ಈ ಶೃಂಗಸಭೆಯ ಮಹತ್ವದ ಉದ್ದೇಶ ಎಂದು ಅಮಿತಾಬ್ ಕಾಂತ್ ಹೇಳಿದರು. ಸಭೆಯ ಫಲಿತಾಂಶಗಳನ್ನು ಸುಧಾರಿಸುವುದು ಮತ್ತು ಜಗತ್ತು ಎದುರಿಸುತ್ತಿರುವ ಅಪೌಷ್ಟಿಕತೆಯ ಸಮಸ್ಯೆಯನ್ನು ಹೋಗಲಾಡಿಸಲು ಕೈಗೊಳ್ಳಬೇಕಾದ ರೂಪುರೇಷೆಗಳನ್ನು ರೂಪಿಸಲಾಗುವುದು. ಈ ಬಗ್ಗೆ ಮಹತ್ವದ ನಿರ್ಣಯ ಕೈಗೊಳ್ಳಬೇಕಾಗಿರುವುದು, ಆ ಸಂಬಂಧ ಕಾರ್ಯಪ್ರವೃತ್ತವಾಗುವುದು ಭಾರತದ ಅಧ್ಯಕ್ಷತೆಯಲ್ಲಿ ನಡೆಯುವ ಜಿ-20 ಶೃಂಗಸಭೆಯ ನಿರ್ಣಾಯಕ ಅಂಶವಾಗಿರಲಿದೆ ಎಂದು ಅಮಿತಾಬ್ ಕಾಂತ್ ಹೇಳಿದರು.
ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅಮಿತಾಬ್ ಕಾಂತ್, ಹಸಿರು ಕ್ರಾಂತಿಯನ್ನು ಮತ್ತಷ್ಟು ತ್ವರಿತಗೊಳಿಸುವುದು, ಹವಾಮಾನ ವೈಪರೀತ್ಯ ತಡೆಗೆ ಕ್ರಮ ಮತ್ತು ಸೇರಿ ವಿಶ್ವ ಆರ್ಥಿಕತೆ ಬಲಗೊಳಿಸುವುದ ಭಾರತದ ಆದ್ಯತೆಗಳಲ್ಲಿ ಒಂದಾಗಿದೆ ಎಂದು ಹೇಳಿದರು. ಭಾರತದ ಅಧ್ಯಕ್ಷತೆ ಎಲ್ಲರನ್ನೂ ಒಳಗೊಳ್ಳುವ ನೀತಿಗಳಿಂದ ಕೂಡಿರಬೇಕು ಎಂದು ಬಯಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇದು ಭಾರತದ ನೀತಿ ಕೂಡಾ ಹೌದು ಎಂದು ಅವರು ಪ್ರತಿಪಾದಿಸಿದರು.