ಸಂಸತ್ತಿನಲ್ಲಿ ಮಣಿಪುರ ಸಂಘರ್ಷ ಜೋರಾಗಿದ್ದು, ಚರ್ಚೆಗೆ ವಿಪಕ್ಷಗಳು ಪಟ್ಟು ಹಿಡಿದಿವೆ. ಮೇಲ್ಮನೆ ಮತ್ತು ಕೆಳಮನೆಯ ಸಭಾಧ್ಯಕ್ಷರು ಸುಗಮ ಕಲಾಪಕ್ಕಾಗಿ ಮನವಿ ಮಾಡಿದರೂ, ವಿಪಕ್ಷಗಳು ಪಟ್ಟು ಸಡಿಲಿಸಿಲ್ಲ. ಈ ಮಧ್ಯೆ ಸುಗಮ ಕಲಾಪಕ್ಕಾಗಿ ಮಣಿಪುರ ಸಂಘರ್ಷ ಚರ್ಚೆಗೆ ಅವಕಾಶ ನೀಡುವುದಾಗಿ ಇಬ್ಬರು ವಿಪಕ್ಷ ನಾಯಕರುಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಪತ್ರ ಬರೆದಿದ್ದಾರೆ. ಸರ್ಕಾರವು ಚರ್ಚೆಗೆ ಸಿದ್ಧವಾಗಿದೆ ಮತ್ತು ಎಲ್ಲಾ ಪಕ್ಷಗಳ ಸಹಕಾರವನ್ನು ಕೋರುತ್ತದೆ ಎಂದು ಹೇಳಿದ್ದಾರೆ.
ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಮಿತ್ ಶಾ ಪತ್ರ ಬರೆದಿದ್ದು, ಈ ಕುರಿತು ಅವರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. "ಇಂದು ನಾನು ಉಭಯ ಸದನಗಳ ವಿರೋಧ ಪಕ್ಷದ ನಾಯಕರಾದ ಅಧೀರ್ ರಂಜನ್ ಚೌಧರಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿದ್ದೇನೆ. ಮಣಿಪುರ ಸಮಸ್ಯೆಯ ಚರ್ಚೆಯಲ್ಲಿ ಅವರ ಅಮೂಲ್ಯವಾದ ಸಹಕಾರಕ್ಕಾಗಿ ಮನವಿ ಮಾಡಿದ್ದೇನೆ. ಮಣಿಪುರದ ಸಮಸ್ಯೆಯನ್ನು ಚರ್ಚಿಸಲು ಸರ್ಕಾರ ಸಿದ್ಧವಾಗಿದೆ. ಇದಕ್ಕಾಗಿ ಎಲ್ಲ ಪಕ್ಷಗಳ ಸಹಕಾರವನ್ನು ಕೋರುತ್ತಿದ್ದೇವೆ. ಈ ಮಹತ್ವದ ಸಮಸ್ಯೆ ಬಗೆಹರಿಸಲು ಎಲ್ಲ ಪಕ್ಷಗಳು ಸಹಕರಿಸುತ್ತವೆ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದ್ದಾರೆ.
ಟ್ವೀಟ್ ಜೊತೆ ವಿಪಕ್ಷ ನಾಯಕರುಗಳಿಗೆ ಬರೆದ ಪತ್ರದ ಫೋಟೋವನ್ನು ಹಂಚಿಕೊಂಡಿದ್ದಾರೆ. ವಿಪಕ್ಷ ನಡೆಸುತ್ತಿರುವ ಪ್ರತಿಭಟನೆಯ ನಡುವೆಯೇ ಲೋಕಸಭೆಯಲ್ಲಿ ಬಹು - ರಾಜ್ಯ ಸಹಕಾರಿ ಸಂಘಗಳ (ತಿದ್ದುಪಡಿ) ಮಸೂದೆ 2022 ಅನ್ನು ಅಂಗೀಕರಿಸಲಾಯಿತು. ಇದಕ್ಕೂ ಮೊದಲು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಟ್ವೀಟ್ ಮಾಡಿ ಪ್ರಧಾನಿ ನರೇಂದ್ರ ಮೋದಿಯವರು ಮಣಿಪುರ ಹಿಂಸಾಚಾರ ಕುರಿತು ಹೇಳಿಕೆ ನೀಡುವಂತೆ ಒತ್ತಾಯಿಸಿದ್ದರು.