ಕೋಲ್ಕತ್ತಾ (ಪಶ್ಚಿಮ ಬಂಗಾಳ):ಬಿಜೆಪಿಯ ಯುವ ಮೋರ್ಚಾ ಕಾರ್ಯಕರ್ತನ ನಿಗೂಢ ಸಾವಿನ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ)ಕ್ಕೆ ಒಪ್ಪಿಸಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಎಂದು ಪಶ್ಚಿಮ ಬಂಗಾಳದ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಅಮಿತ್ ಶಾ ರಾಜ್ಯ ಪ್ರವಾಸದಲ್ಲಿರುವಾಗಲೇ ಶುಕ್ರವಾರ ಬೆಳಗ್ಗೆ ಕೋಲ್ಕತ್ತಾದ ಕಾಸಿಪೋರ್ ರಸ್ತೆಯ ಕೋಣೆಯೊಂದರಲ್ಲಿ 26 ವರ್ಷದ ಅರ್ಜುನ್ ಚೌರಾಸಿಯಾ ಎಂಬ ಯುವಕನ ಶವವು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಬಿಜೆಪಿ ಕಾರ್ಯಕರ್ತ ಅರ್ಜುನ್ ಶವ ಪತ್ತೆಯಾದ ಕೋಣೆಗೆ ತೆರಳಿ ಅಮಿತ್ ಶಾ ಪರಿಶೀಲನೆ ನಡೆಸಿದರು. ನಂತರ ಮೃತನ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಅವರು, ಈ ಘಟನೆಯ ಬಗ್ಗೆ ಕೇಂದ್ರ ಗೃಹ ಸಚಿವಾಲಯವು ರಾಜ್ಯ ಸರ್ಕಾರದಿಂದ ವಿವರವಾದ ವರದಿಯನ್ನು ಕೇಳಲಿದೆ ಎಂದು ಹೇಳಿದರು.
ಅಲ್ಲದೇ, ನಾನು ಮೃತ ಕಾರ್ಯಕರ್ತನ ಕುಟುಂಬ ಸದಸ್ಯರೊಂದಿಗೆ ಮಾತನಾಡಿದ್ದೇನೆ. ಆರ್ಯನ್ ಮತ್ತು ಕುಟುಂಬದವರ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ದೂರಿದ್ದಾರೆ. ಆದ್ದರಿಂದ ಈ ಪ್ರಕರಣದಲ್ಲಿ ಸ್ವತಂತ್ರ ತನಿಖೆ ಆಗಬೇಕೆಂದು ಬಿಜೆಪಿ ನ್ಯಾಯಾಲಯದ ಮೊರೆ ಹೋಗಲಿದೆ. ಜತೆಗೆ ಸಿಬಿಐ ತನಿಖೆಯಾಗಬೇಕು ಎಂದು ನಾನು ಭಾವಿಸುತ್ತೇನೆ ಎಂದು ಶಾ ತಿಳಿಸಿದರು.
ಮಮತಾ ಬ್ಯಾನರ್ಜಿ ಸರ್ಕಾರ ಮೂರನೇ ಅವಧಿಗೆ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದಿದೆ. ಇವರ ಆಡಳಿತದಲ್ಲಿ ಯಾವುದೇ ಕಾನೂನು ಸುವ್ಯವಸ್ಥೆ ಪಾಲನೆ ಆಗುತ್ತಿಲ್ಲ. ರಾಜ್ಯದ ಜನತೆಗಾಗಲಿ, ನ್ಯಾಯಾಂಗಕ್ಕಾಗಲಿ ಟಿಎಂಸಿ ಸರ್ಕಾರ ಮತ್ತು ಇಲ್ಲಿನ ಪೊಲೀಸರ ಮೇಲೆ ನಂಬಿಕೆ ಇಲ್ಲ ಇಲ್ಲದಂತೆ ಆಗಿದೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ಕಾಶಿ ವಿಶ್ವನಾಥ - ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ವಿಡಿಯೋಗ್ರಾಫಿ ಸರ್ವೆ: ಪ್ರಕ್ಷುಬ್ಧ ವಾತಾವರಣ ನಿರ್ಮಾಣ