ಕೋಲ್ಕತ್ತಾ (ಪಶ್ಚಿಮ ಬಂಗಾಳ): ಕೋವಿಡ್ ಹಾವಳಿ ಮುಗಿದ ಬಳಿಕ ಸಿಎಎ ಕಾಯ್ದೆ ಜಾರಿ ತರಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ. ಪ್ರಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ನಡೆದ ಗುರುವಾರ ಸಾರ್ವಜನಿಕ ಕಾರ್ಯಕ್ರಮದ ಉದ್ದೇಶಿಸಿ ಮಾತನಾಡಿರುವ ಅಮಿತ್ ಶಾ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಸರ್ಕಾರದ ಸಿಎಎ ಕಾಯ್ದೆ ಬಗ್ಗೆ ತೃಣಮೂಲ ಕಾಂಗ್ರೆಸ್ ಪಕ್ಷ ಅಪಪ್ರಚಾರ ಮಾಡಿದೆ ಎಂದರು.
ಮಮತಾ ದೀದಿ ಕೇವಲ ಒಳನುಸುಳುವಿಕೆ ಮುಂದುವರೆಯಬೇಕೆಂದು ಬಯಸುತ್ತಾರೆ. ಆದರೆ, ಬಂಗಾಳಕ್ಕೆ ಬಂದಿರುವ ನಿರಾಶ್ರಿತರಿಗೆ ಪೌರತ್ವ ಪಡೆಯಬಾರದು ಎಂಬುವುದು ಅವರ ಉದ್ದೇಶವಾಗಿದೆ. ಸಿಎಎ ಕಾಯ್ದೆಯು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಬಂದ ಅಲ್ಪಸಂಖ್ಯಾತ ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು, ಕ್ರಿಶ್ಚಿಯನರು ಭಾರತೀಯ ಪೌರತ್ವ ಪಡೆಯಲು ಅನುಕೂಲವಾಗಿದೆ ಎಂದು ಶಾ ಪ್ರತಿಪಾದಿಸಿದರು.
ಮೂರು ಬಾರಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಮಮತಾ ಬ್ಯಾನರ್ಜಿ ಅವರಿಗೆ ಜನಾದೇಶ ಸಿಕ್ಕಿದೆ. ತಮ್ಮ ಜೀವನ ದೀದಿ ಉತ್ತಮಗೊಳಿಸುತ್ತಾರೆ ಎಂದು ಜನತೆ ಅಧಿಕಾರ ಕೊಟ್ಟಿದ್ದಾರೆ. ಆದರೆ, ಮಮತಾ ಸರ್ಕಾರ ಭ್ರಷ್ಟಾಚಾರ, ಬಿಜೆಪಿ ಕಾರ್ಯಕರ್ತರ ಹತ್ಯೆಯಲ್ಲಿ ತೊಡಗಿದೆ. ಬಿಜೆಪಿ ಮರು ಹೋರಾಟ ನೀಡಲ್ಲ ಎಂದು ಮಮತಾ ಯೋಚಿಸಬಾರದು ಅಮಿತ್ ಶಾ ಹೇಳಿದರು.
ಕಳೆದ ಪ್ರಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಮೂರು ಸ್ಥಾನದಿಂದ 77ಕ್ಕೆ ಏರಿಸಿದ ಪಶ್ಚಿಮ ಬಂಗಾಳದ ಜನತೆಗೆ ಧನ್ಯವಾದ ತಿಳಿಸುತ್ತೇನೆ. 2.28 ಕೋಟಿ ಮತಗಳು ಬಿಜೆಪಿ ಪರವಾಗಿ ಬಿದ್ದಿವೆ. ಪ್ರತಿ ಗ್ರಾಮದಲ್ಲಿ ಬಿಜೆಪಿ ಬಲಿಷ್ಠವಾಗುತ್ತಿದ್ದು, ಟಿಎಂಸಿ ವಿರುದ್ಧ ಬಿಜೆಪಿ ಸತತ ಹೋರಾಟ ನಡೆಸಲಿದೆ ಎಂದು ಹೇಳಿದ್ದಾರೆ.
ಬಂಗಾಳದ ಬಗ್ಗೆ ಚಿಂತಿಸಬೇಡಿ: ಗೃಹ ಸಚಿವ ಅಮಿತ್ ಶಾ ಅವರಿಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ತಿರುಗೇಟು ಕೊಟ್ಟಿದ್ದಾರೆ. ಗೃಹ ಸಚಿವ ಅಮಿತ್ ಶಾ ಅವರೇ ದೆಹಲಿಯ ಜಹಾಂಗೀರ್ ಪುರಿ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಏನಾಗಿದೆ ಎಂಬುದನ್ನು ನೋಡಿ. ಬಂಗಾಳದ ಬಗ್ಗೆ ಚಿಂತಿಸಬೇಡಿ. ಜನರಲ್ಲಿ ಒಡಕು ಮೂಡಿಸುವುದೇ ಬಿಜೆಪಿಯ ಕೆಲಸ. ಗೃಹ ಸಚಿವರಾಗಿ ಅಮಿತ್ ಶಾ ಏನು ಮಾಡಿದ್ದಾರೆ ಎಂದು ಮಮತಾ ಬ್ಯಾನರ್ಜಿ ಸುದ್ದಿಗೋಷ್ಠಿ ನಡೆಸಿ ಟೀಕಿಸಿದ್ದಾರೆ.
ಆಟ ಮುಗಿದಿದೆ ಎಂದು ಭಾವಿಸಬೇಡಿ. ಒಳ್ಳೆಯದ್ದು ಯಾವತ್ತೂ ಮೇಲುಗೈ ಸಾಧಿಸುತ್ತದೆ. ಎಲ್ಲ ಪ್ರತಿಪಕ್ಷಗಳು ಪ್ರಬಲ ಮತ್ತು ಧೈರ್ಯದಿಂದ ಬಿಜೆಪಿವನ್ನು ಎದುರಿಸಬೇಕಾಗಿದೆ. ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಬುಲ್ಡೋಜರ್ ಕೆಲಸ ಮಾಡಬೇಡಿ. ಬೆಂಕಿಯೊಂದಿಗೆ ಆಟವಾಡಬೇಡಿ. ಜನತೆಯೇ ನಿಮಗೆ ತಕ್ಕ ಉತ್ತರ ನೀಡುವ ಮೂಲಕ ಪ್ರತೀಕಾರ ತೀರಿಸುತ್ತಾರೆ ಎಂದರು.
ಇದನ್ನೂ ಓಡಿ:ಪಶ್ಚಿಮ ಬಂಗಾಳ ಪ್ರವಾಸದಲ್ಲಿ ಗೃಹ ಸಚಿವ: ನಾಳೆ ಗಂಗೂಲಿ - ಅಮಿತ್ ಶಾ ಭೇಟಿ, ರಾಜಕೀಯ ಕುತೂಹಲ